VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ವಿವೇಕಾನಂದದಲ್ಲಿ ’ಚೆಲುವ ತರು’ ಕೃತಿಯ ಬಗೆಗೆ ಅವಲೋಕನ ಕಾರ್ಯಕ್ರಮ – ಕರ್ನಾಟಕದಲ್ಲಿ ಅಧ್ಯಯನ ಸ್ಥಗಿತಗೊಂಡಿದೆ : ಡಾ.ಮಾಧವ ಪೇರಾಜೆ

ಪುತ್ತೂರು : ಕರ್ನಾಟಕದಲ್ಲಿ ಅಧ್ಯಯನ ಸ್ಥಗಿತಗೊಡಿದೆ. ಬುದ್ಧಿಜೀವಿಗಳೆನಿಸಿಕೊಂಡವರು ಹೊಸ ಹೊಸ ಸಂಗತಿಗಳನ್ನು ತಮ್ಮ ಜ್ಞಾನ ಭಂಡಾರಕ್ಕೆ ಸೇರಿಸಿಕೊಳ್ಳದೆ ತಾವು ನಂಬಿದ್ದೇ ಸತ್ಯ ಎಂದುಕೊಂಡಿದ್ದಾರೆ. ಸಂಶೋಧನೆ ಎಂದರೇನು ಎಂಬುದೇ ನಮ್ಮವರಿಗೆ ತಿಳಿದಿಲ್ಲದಿರುವುದು ದುರಂತ. ವಿಷಯಾಧಾರಿತ ಚರ್ಚೆಗಳಾಗದೆ ವೈಯಕ್ತಿಕ ಸೋಲು ಗೆಲುವಿನ ಪ್ರತಿಷ್ಠೆಯಾಗಿ ಪ್ರತಿಯೊಂದು ಸಂಗತಿಗಳೂ ಉಕ್ತಗೊಳ್ಳುತ್ತಿವೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ದ್ರಾವಿಡ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮಾಧವ ಪೇರಾಜೆ ಹೇಳಿದರು.

News Photo - Dr.Madhava Peraje

ಅವರು ತಾವು ಅನುವಾದಿಸಿದ ಚೆಲುವ ತರು ಕೃತಿಯ ಬಗೆಗೆ ವಿವೇಕಾನಂದ ಕಾಲೇಜಿನ ವಿಕಾಸಂ ಸಂಸ್ಕೃತ ಸಂಘ, ಕನ್ನಡ ಸಂಘ, ಹಿಂದಿ ಸಂಘ  ಮತ್ತು ಪತ್ರಿಕೋದ್ಯಮ ವಿಭಾಗ ಜಂಟಿಯಾಗಿ ಆಯೋಜಿಸಿದ ಅವಲೋಕನ ಕಾರ್ಯಕ್ರಮದಲ್ಲಿ sಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಶುಕ್ರವಾರ ಮಾತನಾಡಿದರು.

ಬ್ರಿಟಿಷರು ಭಾರತಕ್ಕೆ ಬರುವ ಪೂರ್ವದಲ್ಲಿ ಇಲ್ಲಿ ಯಾವುದೇ ರೀತಿಯ ಉತ್ಕೃಷ್ಟ ಮಾದರಿಯ ಶಿಕ್ಷಣ ವ್ಯವಸ್ಥೆ ಇರಲಿಲ್ಲ ಎಂಬುದು ಬ್ರಿಟಿಷರೇ ರೂಪಿಸಿದ ಇತಿಹಾಸ. ನಾವು ಆ ಬಗೆಗೆ ಯಾವ ಪುರಾವೆಯನ್ನೂ ಕೇಳದೆ ಒಪ್ಪಿಕೊಂಡಿದ್ದೇವೆ. ಆದರೆ ಸತ್ಯ ಬೇರೆಯದೇ ಇದೆ. ಈ ದೇಶ ಜಗತ್ತಿಗೇ ಮಾದರಿ ಆಗಬಹುದಾದ ಅದ್ಭುತ ಶಿಕ್ಷಣ ವ್ಯವಸ್ಥೆಯನ್ನು ಹೊಂದಿತ್ತು. ಪ್ರತಿ ೬೨ ಮಕ್ಕಳಿಗೊಂದರಂತೆ ಇಲ್ಲಿ ಶಾಲೆ ಇತ್ತು. ಈ ಬಗೆಗೆ ಸಾಕ್ಷಾಧಾರಗಳನ್ನು ಒದಗಿಸಿ ಕೃತಿ ರಚಿಸಿದರೆ ಇದನ್ನು ಅನುಮಾನದಿಂದ ಕಾಣುತ್ತಾರೆ. ನಮ್ಮ ದೇಶದ ಬಗೆಗೆ ನಕಾರಾತ್ಮಕ ವಿಚಾರ ಹೇಳಿದಾಗ ಪ್ರಶ್ನಿಸದೇ ಒಪ್ಪಿಕೊಳ್ಳುವ ಮಂದಿ ಪುರಾವೆ ಕೊಟ್ಟರೂ ಇಲ್ಲಿನ ಉತ್ಕೃಷ್ಟತೆಯನ್ನು ನಂಬುವುದಿಲ್ಲ ಎಂದಾದರೆ ನಮ್ಮ ಮನಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದನ್ನು ಗಮನಿಸಬೇಕು ಎಂದರು.

ಪ್ರಾಚೀನ ಭಾರತದಲ್ಲಿ ಶಿಕ್ಷಣಕ್ಕೆ  ಆದ್ಯತೆಯಿತ್ತು. ಮೆಕಾಲೆಯ ಶಿಕ್ಷಣ ವ್ಯವಸ್ಥೆಯನ್ನು ನಾವು ಇಂದಿನ ದಿನಗಳಲ್ಲಿ ಕಾಣಬಹುದು. ಆದರೆ ಹಿಂದಿನ ಕಾಲದಲ್ಲೇ ಭಾರತದಲ್ಲಿ ಪ್ರಭಲವಾದ ಶಿಕ್ಷಣ ವ್ಯವಸ್ಥೆಯಿತ್ತು. ನಮ್ಮ ಹಿರಿಯರು ಅತ್ಯುತ್ತಮ ಶಿಕ್ಷಣವನ್ನು ಪಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಭಾರತೀಯ ಶಿಕ್ಷಣ ಮಾದರಿಯ ಸಂಪೂರ್ಣ ವಿವರವನ್ನು ಚೆಲುವ ತರು ಪುಸ್ತಕದಲ್ಲಿ ಕಾಣಬಹುದಾಗಿದೆ. ವಿದ್ಯಾರ್ಥಿಗಳು  ಓದುವ ಅಭ್ಯಾಸವನ್ನು ಹೆಚ್ಚಿಸಿಕೊಂಡಾಗ ಮಾತ್ರ ವಿಚಾರಗಳನ್ನು ತಿಳಿದುಕೊಳ್ಳಲು  ಸಾಧ್ಯ. ಓದುವ ಕಲೆಯನ್ನು  ರೂಢಿಸಿಕೊಳ್ಳಬೇಕು ಮಾತ್ರವಲ್ಲದೆ ಇಂದಿನ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ  ಕ್ಷೇತ್ರವನ್ನು ಆಯ್ದುಕೊಳ್ಳಲು ಸಾಧ್ಯವಾಗುವ ಶಿಕ್ಷಣವು ದೊರೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಚೆಲುವಿನ ತರು ಕೃತಿಯು ಭಾರತೀಯ ಸಂಸ್ಕೃತಿ ಶಿಕ್ಷಣದ ಬಗ್ಗೆ ಸಮಗ್ರ ಮಾಹಿತಿಯನ್ನು ಹೊಂದಿದೆ. ಮಠ ದೇವಾಲಯ ಇವುಗಳೇ ಶಿಕ್ಷಣ ನೀಡುವ  ಸಂಸ್ಥೆಗಳಾಗಿದ್ದವು. ಮೆಕಾಲೆಗಿಂತಲೂ ಮೊದಲೇ ವಿಶಿಷ್ಟ ಶಿಕ್ಷಣ ವ್ಯವಸ್ಥೆ ಭಾರತದಲ್ಲಿತ್ತು. ಈ ವಿಚಾರಗಳು ಚೆಲುವಿನ ತರು ಕೃತಿಯಲ್ಲಿ ಕಾಣಬಹುದು ಎಂದು ಹೇಳಿದರು.

.ವಿದ್ಯಾರ್ಥಿ ಶಿವಶಂಕರ ಮಯ್ಯ ಪ್ರಾರ್ಥಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ್.ಎಚ್.ಜಿ ಸ್ವಾಗತಿಸಿದರು. ಉಪನ್ಯಾಸಕ ಡಾ.ರೋಹಿಣಾಕ್ಷ ಪ್ರಸ್ತಾವಿಸಿದರು. ಕನ್ನಡ ಸಂಘದ ಸಂಯೋಜಕ ಡಾ.ಮನಮೋಹನ.ಎಂ ವಂದಿಸಿದರು. ವಿದ್ಯಾರ್ಥಿಗಳಾದ ಆಝಾದ್ ಕಂಡಿಗ ಮತ್ತು ವಿನುತಾ.ಎಂ.ಎಸ್ ನಿರ್ವಹಿಸಿದರು.