VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ಭಾರತ ಇಡೀ ಪ್ರಪಂಚದ ರಾಷ್ಟ್ರಗಳ ಮಾತೆ: ಕೆನ್ ಲವ್

ಪುತ್ತೂರು: ಹಣ್ಣಿನ ಕೃಷಿ ಲಾಭದಾಯಕ. ಆದರೆ ಒಬ್ಬೊಬ್ಬರೇ ಬೆಳೆಯುವುದಕ್ಕಿಂತ ಒಂದಷ್ಟು ಮಂದಿ ಗುಂಪಿನಲ್ಲಿ ಬೆಳೆಯುವುದು ಉತ್ತಮ. ಅನೇಕ ಮಂದಿ ಹಣ್ಣಿನ ಕೃಷಿಯಲ್ಲಿ ತೊಡಗಿದಾಗ ಸರ್ಕಾರವೂ ಸಮಸ್ಯೆಗೆ ಸ್ಪಂದಿಸುತ್ತದೆ ಎಂದು ಹವಾಯಿ ದ್ವೀಪದ ಹಣ್ಣು ಕೃಷಿಕ ಕೆನ್ ಲವ್ ಹೇಳಿದರು.

          ಅವರು ಭಾನುವಾರ ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ನಡೆಸಲಾಗುತ್ತಿರುವ ಕೃಷಿ-ಖುಷಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಣ್ಣು ಕೃಷಿ ವಿಷಯವಾಗಿ ಅನುಭವ ಹಂಚಿಕೊಂಡರು.

News Photo - Ken

          ಭಾರತದಲ್ಲಿ ಅನೇಕ ಹಣ್ಣುಗಳನ್ನು ಅವಗಣನೆ ಮಾಡಲಾಗುತ್ತಿದೆ. ಇದರ ಬದಲಾಗಿ ಪ್ರತಿಯೊಂದು ಹಣ್ಣುಗಳ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗೆ ಒಯ್ದರೆ ಅಪಾರ ಅವಕಾಶ ತೆರೆದುಕೊಳ್ಳುತ್ತದೆ. ಹಣ್ಣಿನಲ್ಲಿರುವ ಔಷಧೀಯ ಅಂಶಗಳ ಆಧಾರದಲ್ಲೂ ಮಾರುಕಟ್ಟೆಯನ್ನು ಸೃಷ್ಟಿಸಲು ಮತ್ತು ವೃದ್ಧಿಸಲು ಸಾಧ್ಯ. ಭಾರತದಲ್ಲಿ ವಿಶಾಲವಾದ ಭೂಮಿ ಇದೆ. ಹೀಗಾಗಿ ಯಾವುದೇ ಕೃಷಿಯಲ್ಲಿ ತೊಡಗುವುದಕ್ಕೂ ಇಲ್ಲಿ ಸಮೃದ್ಧ ಅವಕಾಶಗಳಿವೆ. ಪುನರ್ಪುಳಿ ಅಪಾರ ಭವಿಷ್ಯ ಹೊಂದಿರುವ ಹಣ್ಣು ಎಂದು ಅಭಿಪ್ರಾಯಪಟ್ಟರು.

          ಹಣ್ಣುಗಳನ್ನು ಹೆಚ್ಚು ದಿನಗಳ ಕಾಲ ಉಳಿಸಿಕೊಳ್ಳಲು ರಾಸಾಯನಿಕ ಸಿಂಪಡಣೆ ಮಾಡಬೇಕಿಲ್ಲ. ಯಾವುದೇ ಹಣ್ಣುಗಳನ್ನು ಬುಟ್ಟಿಗಳಲ್ಲಿ ಅಥವ ಬಕೆಟ್‌ಗಳಲ್ಲಿ ಕೊಯ್ಯಬಾರದು. ಇದರಿಂದ ಒಂದರ ಮೇಲೊಂದು ಹಣ್ಣು ನಿಂತು ತಳಮಟ್ಟದ ಹಣ್ಣುಗಳು ಬೇಗನೆ ಹಾಳಾಗುತ್ತವೆ. ಪ್ರತಿಯೊಂದು ಹಣ್ಣನ್ನೂ ಬೇರೆಬೇರೆಯಾಗಿಯೇ ಇಡಬೇಕು. ಇದಲ್ಲದೆ ಹಣ್ಣಿನ ದೇಹಪ್ರಕೃತಿಗನುಗುಣವಾಗಿ ಕೊಯ್ದ ತಕ್ಷಣ ತೋಟದಲ್ಲಿಯೇ ನಿಗದಿತ ತಾಪಮಾನದಲ್ಲಿ ಶೇಖರಿಸಿಟ್ಟರೆ ಯಾವುದೇ ಹಣ್ಣು ಅನೇಕ ದಿನಗಳವರೆಗೆ ಕೆಡದೆ ಉಳಿಯಲು ಸಾಧ್ಯ ಎಂದರು.

          ಭಾರತ ಇಡೀ ಪ್ರಪಂಚದ ರಾಷ್ಟ್ರಗಳ ಮಾತೆ. ಇಲ್ಲಿನ ಅನುಭವ ಅನನ್ಯವಾದುದು. ಈ ದೇಶದ ಒಡನಾಟ ಹೊಸ ಹೊಸ ಅಧ್ಯಯನಾನುಭವವನ್ನು ಕಟ್ಟಿಕೊಡುತ್ತದೆ. ಈ ದೇಶಕ್ಕೆ ಕಾಲಿಡುವ ಮೊದಲು ಜಪಾನ್ ಶ್ರೇಷ್ಟ ಅಂದುಕೊಂಡಿದ್ದರೆ ಇಲ್ಲಿಗೆ ಬಂದ ನಂತರ ಜಗತ್ತಿನ ಅದ್ಭುತ ರಾಷ್ಟ್ರ ಭಾರತ ಎಂದೆನಿಸಿದೆ. ಇಲ್ಲಿ ತುಂಬಾ ಸಹಜವಾದ. ಮನೆಯ ವಾತಾವರಣ ಲಭ್ಯವಿದೆ ಎಂದು ಹೇಳಿದರು.

          ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಮಾತನಾಡಿ ಕಾಡು ಹಣ್ಣುಗಳೆಂದು ಅವಜ್ಞೆಗೆ ಒಳಗಾದ ಹಣ್ಣುಗಳನ್ನು ನಾಡಿಗೆ ತರುವ ಪ್ರಯತ್ನ ಆಗಬೇಕು. ಪ್ರಸ್ತುತ ಪ್ರಾಮುಖ್ಯತೆಯನ್ನು ಹೊಂದಿಲ್ಲದ ಹಣ್ಣುಗಳ ಬಗೆಗೆ ಸಂಶೋಧನೆಗಳು ನಡೆಯಬೇಕಿದೆ. ಯಾಕೆಂದರೆ ಹಣ್ಣು ಕೃಷಿಗೆ ಸಾಕಷ್ಟು ಭವಿಷ್ಯವಿದೆ. ಈ ಕ್ಷೇತ್ರದಲ್ಲಿ ಕೃಷಿಕರು ಮುಂದಡಿಯಿಡಬಹುದಾಗಿದೆ ಎಂದು ನುಡಿದರು.

ಜಗತ್ತಿನ ಯಾವ ಭಾಗದಲ್ಲೂ ದೊರಕದ ಕೆಂಪು ಸೊಳೆ ಹಲಸು ನಮ್ಮ ದೇಶದ ನಮ್ಮದೇ ರಾಜ್ಯದಲ್ಲಿದೆ. ಇಂತಹ ಸಂಗತಿಗಳನ್ನು ಅರಿಯಬೇಕು ಮತ್ತು ನಾವು ಕಡೆಗಣಿಸುತ್ತಿರುವ ಹಲಸಿಗೆ ವಿದೇಶಗಳಲ್ಲಿ ಅಪಾರ ಬೇಡಿಕೆ ಇದೆ. ದೀವಿ ಹಲಸು ಹಣ್ಣಾಗಿಬಿಟ್ಟರೆ ನಮ್ಮಲ್ಲಿ ಅನೇಕರು ನಿಷ್ಪ್ರಯೋಜಕ ಎಂದು ಎಸೆಯುತ್ತಾರೆ. ವಿದೇಶದ ಮಂದಿ ದೀವಿ ಹಲಸು ಹಣ್ಣಾಗುವುದನ್ನೇ ಕಾಯುತ್ತಾರೆ. ಒಟ್ಟಿನಲ್ಲಿ ನಮ್ಮಲ್ಲಿನ ಹಣ್ಣುಗಳ ಮೌಲ್ಯವರ್ಧರನೆ ಆಗಬೇಕು ಎಂದರಲ್ಲದೆ ಹವಾಯಿ ದ್ವೀಪ ಜಗತ್ತಿನ ಹಣ್ಣುಗಳ ಮ್ಯೂಸಿಯಂ. ಅನೇಕಾನೇಕ ಭಿನ್ನ ಹಣ್ಣುಗಳನ್ನು ಅಲ್ಲಿ ಕಾಣುವುದಕ್ಕೆ ಸಾಧ್ಯ ಎಂದರು.

ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯ ಆರ್. ನಿಡ್ಪಳ್ಳಿ ವಂದಿಸಿದರು. ಉಪನ್ಯಾಸದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.