VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಕುಞಣ್ಣ ಗೌಡ ಅನ್ನುವ ಬಹುಮುಖ ಪ್ರತಿಭೆ

1973 ಜೂನ್ ತಿಂಗಳಲ್ಲಿ ವಿವೇಕಾನಂದ ಕಾಲೇಜಿನಲ್ಲಿ ನೌಕರರಾಗಿ ಸೇವೆಗೆ ಸೇರಿದ ಶ್ರೀ ಪಿ ಕುಞ್ಞಣ್ಣಗೌಡ ಇವರು ಜುಲೈ ತಿಂಗಳಲ್ಲಿ ನಿವೃತ್ತಿಗೊಂಡಿದ್ದಾರೆ. ಹೆಸರೇ ಸೂಚಿಸುವಂತೆ ನಮಗೆಲ್ಲರಿಗೂ ಅಣ್ಣನಾಗಿ, ಮಾರ್ಗದರ್ಶಕರಾಗಿದ್ದರು. ಸಜ್ಜನ ವ್ಯಕ್ತಿಯಾಗಿ ಮಾತ್ರವಲ್ಲದೆ ನಿಗರ್ವಿಯಾಗಿ ಇತರರಿಗೆ ಮಾದರಿಯಾದವರು. ಎಲ್ಲರೊಂದಿಗೂ ಪ್ರೀತಿಯಿಂದ ಬೆರೆಯುವ, ಹಿರಿಯ-ಕಿರಿಯರೆಂಬ ಭೇದವೆಣಿಸದ ಶ್ರೀಯುತರು ಎಲ್ಲರ ಪ್ರೀತಿಗೆ ಪಾತ್ರರಾದವರು. ಅವರ ನಡೆ ನುಡಿಗಳು ಸದಾ ಅನುಕರಣೀಯ ಎಂಬುದು ಗಮನಾರ್ಹ. ಆರಂಭದಲ್ಲಿ ಕೆಲವು ಸಮಯ ಕಾಲೇಜಿನ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು ನಿವೃತ್ತಿ ಸಮಯದಲ್ಲಿ ಕಛೇರಿಯ ಅಧೀಕ್ಷಕರಾಗಿದ್ದರು.

ಕಾಲೇಜಿನಲ್ಲಿ 39 ವರ್ಷಗಳ ಸೇವೆ ಸಲ್ಲಿಸಿರುವ ಶ್ರೀ ಕುಞ್ಞಣ್ಣಗೌಡ ಓರ್ವ ನಿಷ್ಠಾವಂತ ಹಾಗೂ ಪ್ರಾಮಾಣಿಕ ನೌಕರರಾಗಿದ್ದರು. ತಮ್ಮ ಕೆಲಸವಾಗದೆ ಎಂದೂ ಕಾಲೇಜಿನಿಂದ ಹೊರಟವರಲ್ಲ. ಎಷ್ಟೋ ಸಂದರ್ಭಗಳಲ್ಲಿ ಸಂಜೆ ಆರರ ಮೇಲೂ ಕಛೇರಿಯಲ್ಲಿ  ಕುಞಣ್ಣ ಗೌಡರನ್ನು ಕಾಣುವುದಕ್ಕೆ ಸಾಧ್ಯವಿತ್ತು. ಅದಕ್ಕೆ ಕಾರಣ ಅವರ ನಿಷ್ಟೆ. ಅವರು ತಮ್ಮನ್ನು ತಾವು ಕೆಲಸಕ್ಕೆ ಅರ್ಪಿಸಿಕೊಂಡವರೆಂದೇ ಹೇಳಬಹುದು. ನಿವೃತ್ತಿಯ ಕೊನೆಯ ದಿನದವರೆಗೂ ಅಪಾರ ಶ್ರದ್ಧೆಯಿಂದ ಕಾಯಕದಲ್ಲಿ ನಿರತರಾದವರು. ಕಡೆಯ ದಿನದಲ್ಲೂ ಅವರ ಕೆಲಸದ ಕ್ರಮವನ್ನು, ಉತ್ಸಾಹವನ್ನು ನೋಡುತ್ತಿದ್ದರೆ ನಾಳೆ ನಿವೃತ್ತಿಯಾಗುವವರು ಇವರೇನಾ ಅಂತ ಅಚ್ಚರಿ ಮೂಡುತ್ತಿತ್ತು.

ಈ ನಡುವೆ ಇನ್ನೊಂದು ಮುಖ್ಯ ವಿಚಾರವೆಂದರೆ ಅದು ಶ್ರೀಯುತರ ಕೆಲಸದ ಶೈಲಿ. ಅವರು ಕಛೇರಿಯಲ್ಲಿದ್ದಾರೆಂದು ನೋಡಿದ ಮೇಲೆ ಹೇಳಬಹುದೇ ವಿನಃ ಹೊರಗಿನಿಂದ ಮಾತು ಕೇಳಿಸಿಕೊಂಡ ನಿರ್ಧರಿಸಲು ಸಾಧ್ಯವಿಲ್ಲ. ಯಾಕೆಂದರೆ ಶ್ರೀಯುತರು ಮೌನಿ ಮತ್ತು ಪರಿಶ್ರಮಿ. ಮಾತು ಕಡಿಮೆ ಹೆಚ್ಚು ದುಡಿಮೆ ಎಂಬುದು ಕುಞಣ್ಣ ಗೌಡರಿಗೆ ಸರಿಯಾಗಿ ಒಪ್ಪುವಂತಹದ್ದು. ಹಾಗಾಗಿ ಅವರ ಕೆಲಸದ ಶೈಲಿ, ಕ್ರಮಗಳೇ ಇತರರಿಗೊಂದು ಮಾದರಿ.

ತಮ್ಮ ಶೈಕ್ಷಣಿಕ ಕಾರ್ಯಗಳಾಚೆಗೂ ಆಸಕ್ತಿಯನ್ನು ಬೆಳೆಸಿಕೊಂಡವರು ಕುಞಣ್ಣ ಗೌಡರು. ಯಕ್ಷಗಾನ, ನಾಟಕ, ಸಂಗೀತ ಇತ್ಯಾದಿ ಕಲೆಗಳೆಂದರೆ ಅವರಿಗೆ ಬಲು ಇಷ್ಟ. ಪುತ್ತೂರಿನಲ್ಲಿ ಯಕ್ಷಗಾನ ಸಪ್ತಾಹವಿದ್ದರೆ ಶ್ರೀಯುತರು ಅಲ್ಲಿ ಹಾಜರು!. ಹಾಗಾಗಿಯೇ ಅವರಿಗೆ ಅನೇಕ ಪೌರಾಣಿಕ ಕಥೆ-ಹಿನ್ನಲೆಗಳು ಸ್ಪಷ್ಟವಾಗಿ ತಿಳಿದಿವೆ. ಸ್ವತಃ ನಾಟಕ ಕಲಾವಿದರೂ ಹೌದು. ಕಾಲೇಜು ಸಿಬ್ಬಂದಿ ವರ್ಗದ ನಾಟಕ ತಂಡದಲ್ಲಿ ಇವರು ಪ್ರಮುಖ ಕಲಾವಿದನಾಗಿ ಹೆಸರು ಗಳಿಸಿದವರು. ಅಮೃತ ಸೋಮೇಶ್ವರ, ಡಾ. ಎಚ್.ಮಾಧವ ಭಟ್, ದಿ. ಯು. ರಾಮಮೋಹನ ರಾವ್ ಮೊದಲಾದವರೊಂದಿಗೆ ಬಣ್ಣ ಹಚ್ಚಿದ ಕೀರ್ತಿ ಇವರದು.

ಸಾಮಾಜಿಕ ಕೆಲಸಗಳಲ್ಲೂ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡವರು. ವಿಶ್ವ ಹಿಂದೂ ಪರಿಷತ್‌ನ ನೆಹರುನಗರ ಘಟಕದ ಕಾರ್ಯದರ್ಶಿಯಾಗಿ ಅನೇಕ ಜನಪರ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ಅಂತೆಯೇ ಪರಿಷತ್‌ನ ಆಶ್ರಯದಲ್ಲಿ ಬರುವ ವಿವಾಹ ವೇದಿಕೆಯಲ್ಲೂ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಲ್ಲದೆ ಅನೇಕರಿಗೆ ಕಂಕಣ ಭಾಗ್ಯ ಕಲ್ಪಿಸಿದ ಹಿರಿಮೆ ಇವರದು. ಅಲ್ಲದೆ ಬಾಲ ಸಂಸ್ಕಾರ ಕೇಂದ್ರದಲ್ಲೂ ಕೆಲಸ ಮಾಡಿದ್ದಾರೆ.

ಶ್ರೀಮತಿ ಯೋಗಿಣಿ ಇವರ ಧರ್ಮಪತ್ನಿ. ಹಿರಿಯ ಮಗ ವಿಜೇತ ಬಿಎಸ್‌ಎನ್‌ಎಲ್ ನೌಕರರಾಗಿದ್ದು, ಮಗಳು ಶ್ರೀಮತಿ ವಿದ್ಯಾ ನಮ್ಮಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಉಪಾನ್ಯಾಸಕಿಯಾಗಿರುತ್ತಾರೆ.ಇನ್ನೋರ್ವ ಪುತ್ರ ವಿಕ್ರಂ ನಮ್ಮ ಸಂಸ್ಥೆಯಲ್ಲಿ ಎಂ ಬಿ ಎ ವ್ಯಾಸಾಂಗ ಮಾಡುತ್ತಿದ್ದಾರೆ.ಅತ್ಯಂತ ಸೌಜನ್ಯ ಸ್ವಭಾವದವರಾದ ಶ್ರೀಕುಞ್ಞಣ್ಣಗೌಡಅವರ ನಿವೃತ್ತಿ ಜೀವನವು ಸುಃಖಕರವಾಗಿರಲಿ ಎಂದುದೇವರಲ್ಲಿ ನಮ್ಮೆಲ್ಲರ ಪ್ರಾರ್ಥನೆ.

ಕುಞಂಣ್ಣ ಗೌಡರು ಜನಿಸಿದ್ದು ಆಗಸ್ಟ್ 1, 1952ರಂದು. ಗಿರಿಯಪ್ಪ ಗೌಡ ಮತ್ತು ರಾಮಕ್ಕ ದಂಪತಿಗಳ ಆರು ಜನ ಮಕ್ಕಳಲ್ಲಿ ಇವರು ನಾಲ್ಕನೆಯವರು. ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಳದ ಅಣಿಲಕಟ್ಟೆ ಶಾಲೆಯಲ್ಲೂ, ಹಿರಿಯ ಪ್ರಾಥಮಿಕ ಶಿಕ್ಷಣವನ್ನು ವಿಟ್ಲದ ವಿಠಲ ಹೈಯರ್ ಎಲಿಮೆಂಟರಿ ಶಾಲೆಯಲ್ಲೂ, ಹೈಸ್ಕೂಲ್ ಶಿಕ್ಷಣವನ್ನು ವಿಠಲ ಪದಿವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ಅನಂತರ ಮೈಸೂರಿನ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಬಿ.ಎ ಪದವಿ ಪೂರೈಸಿದರು.

ಆರಂಭದಲ್ಲಿ ವಿಟ್ಲದ ಸಿಪಿಸಿಆರ್‌ಐ ಯಲ್ಲಿ ಕರ್ತವ್ಯ ನಿರ್ವಹಿಸಿದ ಇವರು ಅನಂತರ ವಿಟ್ಲದ ಬೆನಕ ಕ್ಲಿನಿಕ್‌ನಲ್ಲಿ ಡಾ. ರಾಮಮೋಹನ ರಾವ್ ಅವರಿಗೆ ಸಹಾಯಕನಾಗಿ ಕೆಲಸ ನಿರ್ವಹಿಸಿದರು. ನಂತರ ವಿವೇಕಾನಂದ ಕಾಲೇಜಿನಲ್ಲಿ 39 ವರ್ಷಗಳ ಸುದೀರ್ಘ ಸೇವೆ.

ನನಗೆ ಶಿಕ್ಷಕನಾಗಬೇಕೆಂಬ ಆಸೆ ಇತ್ತು. ಆದ್ರೆ ಈ ವೃತ್ತಿಗೆ ಬಂದೆ. ಈ ನಡುವೆ ಕಾಕತಾಳೀಯವೆಂದರೆ ಪುತ್ತೂರಿನ ವಯಸ್ಕರ ಶಿಕ್ಷಣ ರಾತ್ರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇಲ್ಲಿಯ ಕೆಲಸ ಮಾಡುತ್ತಲೇ ಸಂಜೆಯ ಬಿಡುವಿನ ವೇಳೆಯಲ್ಲಿ ಅಲ್ಲಿಯ ಕರ್ತವ್ಯವನ್ನೂ ನಿರ್ವಹಿಸಿದೆ. ಒಟ್ಟನಲ್ಲಿ ನಾನು ಶಿಕ್ಷಕನಂತೂ ಆದೆ ಎನ್ನುತ್ತಾರೆ ಗೌಡರು.

 ಲೇಖನ : ಡಾ.ಶ್ರೀಧರ ಎಚ್.ಜಿ ಮತ್ತು ರಾಕೇಶ್ ಕುಮಾರ್ ಕಮ್ಮಜೆ