ನೇಪಥ್ಯಕ್ಕೆ ಸರಿಯುತ್ತಿರುವ ಮಾದರಿ ಶಿಕ್ಷಕ ಡಾ.ಪರಮೇಶ್ವರ ಭಟ್
ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಸುದೀರ್ಘ ಇತಿಹಾಸವಿದೆ. 1965ರಲ್ಲಿ ಕಾಲೇಜು ಆರಂಭಗೊಂಡ ದಿನದಿಂದಲೇ ವಾಣಿಜ್ಯ ವಿಭಾಗವೂಕಾರ್ಯ ಆರಂಭಿಸಿದೆ. ಈ ವಿಭಾಗವನ್ನುಕಟ್ಟಿ ಬೆಳೆಸಿದ ಮಹನೀಯರಲ್ಲಿ ಪ್ರೊ. ವಸಂತರಾವ್ ಪಟ್ಟಿ, ಪ್ರೊ. ಎಂ.ಎಸ್.ಅಪ್ಪ, ಪ್ರೊ. ಎ.ವಿ.ನಾರಾಯಣ, ಪ್ರೊ. ಜಿ.ಟಿ.ಭಟ್, ಪ್ರೊ.ಆರ್. ವೇದವ್ಯಾಸ ಮೊದಲಾದವರು ಪ್ರಮುಖರು.ಇದೇ ಪರಂಪರೆಗೆ ಸೇರಲೇಬೇಕಾದಇನ್ನೊಂದು ಹೆಸರು ಡಾ. ಪರಮೇಶ್ವರ ಭಟ್ ಎನ್. ಕಳೆದ 34 ವರ್ಷಗಳಿಂದ ವಿಭಾಗದ ಅವಿಭಾಜ್ಯ ಅಂಗವಾಗಿ, ಅಭಿವೃದ್ಧಿಗೆ ಕಾರಣರಾಗಿ ಮತ್ತು ಸಾಕ್ಷಿಯಾಗಿ, ಕಾಲೆಜಿಗೆ ತನ್ನನ್ನು ತಾನು ಅರ್ಪಿಸಿಕೊಂಡ, ವಿದ್ಯಾರ್ಥಿಗಳ ಈ ನೆಚ್ಚಿನ ಗುರು ಜುಲೈ 31ರಂದು ನಿವೃತ್ತರಾಗುತ್ತಿದ್ದಾರೆ. ವಿಭಾಗದ ಬೆಳವಣಿಗೆಯೊಂದಿಗೆ ತಾನೂ ಬೌದ್ಧಿಕವಾಗಿ ಸಾಕಷ್ಟು ಸಾಧಿಸಿದ ಹಿರಿಮೆ ಡಾ. ಭಟ್ ಅವರದು.
ಡಾ. ಪರಮೇಶ್ವರ ಭಟ್ ಎನ್ ಇವರು 15.07.1952ರಂದು ಕಾಸರಗೋಡಿನ ನೆಕ್ಕರೆಕಳಯ ಎಂಬಲ್ಲಿ ಶ್ರೀ ಉದನೇಶ್ವರ ಭಟ್ ಹಾಗೂ ಶ್ರೀಮತಿ ಸುಶೀಲ ದಂಪತಿಗಳಿಗೆ ಎರಡನೆಯ ಮಗನಾಗಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೊಗ್ರಾಲ್ ಪುತ್ತೂರು ಮತ್ತು ಪಳ್ಳತ್ತಡ್ಕ ಶಾಲೆಯಲ್ಲಿ ಮುಗಿಸಿ ನವಜೀವನ ಹೈಸ್ಕೂಲ್ ಬದಿಯಡ್ಕದಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪಡೆದರು.1970ರಿಂದ 74ರ ನಡುವೆ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಪಡೆದರು. ನಂತರ ಅಂದಿನ ಮಂಗಳ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿ(ಮೈಸೂರು ವಿಶ್ವಾವಿದ್ಯಾನಿಲಯ) ತಮ್ಮ ಎಂ.ಕಾಂ ಪದವಿ ಪೂರೈಸಿದರು.
ಹಾಸನದ ಎನ್.ಡಿ.ಆರ್.ಕೆ ಕಾಲೇಜಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಡಾ.ಭಟ್ ಸ್ವಲ್ಪ ಸಮಯ ಮಂಗಳೂರಿನ ಬೆಸೆಂಟ್ ಸಂಜೆ ಕಾಲೇಜಿನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 1978ರಲ್ಲಿ ವಿವೇಕಾನಂದ ಕಾಲೇಜಿಗೆ ಉಪನ್ಯಾಸಕನಾಗಿ ಸೇರ್ಪಡೆಗೊಂಡು ಇದೀಗ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ. ತನ್ಮೂಲಕ ತಾನು ಕಲಿತ ಕಾಲೇಜಿನಲ್ಲೇ ಸೇವೆ ಸಲ್ಲಿಸುವ ಅಪೂರ್ವ ಅವಕಾಶ ಅವರದಾಗಿತ್ತೆನ್ನುವುದು ಗಮನಾರ್ಹ.
ಉಪನ್ಯಾಸಕ ವೃತ್ತಿಗೆ ಸೇರಿದ ನಂತರವೂ ಪರಮೇಶ್ವರ ಭಟ್ ಸುಮ್ಮನೆ ಕುಳಿತವರಲ್ಲ. A Study of Panbeeda Business in Mangalore City ಎಂಬ ವಿಷಯದಕುರಿತು ಎಂ.ಫಿಲ್ ಪದವಿಯನ್ನೂ, A Socio Economic Study of Tibetan Refugees at Bylakuppe Settelement in Karnataka ಎಂಬ ವಿಷಯದ ಬಗೆಗೆ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಯನ್ನೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.
ಶೈಕ್ಷಣಿಕ ಕ್ಷೇತ್ರದ ಇವರ ಅನುಭವವನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾನಿಲಯವು ಇವರನ್ನು ಬಿಕಾಂ ಮತ್ತು ಬಿಬಿಎಂ ಅಧ್ಯಯನ ಮಂಡಳಿಗಳ ಸದಸ್ಯರಾಗಿಯೂ, ಪರೀಕ್ಷಾ ಸಮಿತಿಯ ಸದಸ್ಯ ಹಾಗೂ ಅಧ್ಯಕ್ಷರಾಗಿಯೂ ನೇಮಿಸಿದೆ ಎಂಬುದು ಗಮನಾರ್ಹ ಸಂಗತಿ. ಈ ನಡುವೆ ಡಾ.ಭಟ್ 13 ಮಂದಿ ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತೆಯೇ ಪ್ರಸ್ತುತ ಇಬ್ಬರು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿಗಾಗಿ ಸಂಶೋಧನೆ ನಡೆಸುತ್ತಿದ್ದಾರೆ.
ನನ್ನ ಮತ್ತು ನನ್ನ ಬದುಕಿನ ಮೇಲೆ ಗಾಢವಾಗಿ ಪ್ರಭಾವ ಬೀರಿದ ವ್ಯಕ್ತಿಗಳು ಇಬ್ಬರು. ಮೊದಲನೆಯವರರು ನನ್ನ ಎಂಕಾಂ ಅಧ್ಯಾಪಕರಾದ ಪ್ರೊ.ಬಿ.ಟಿ.ನಾಗರಾಜ್. ಮತ್ತೋರ್ವರು ಡಾ.ಎಂ.ಪಿ. ಸುಬ್ರಮಣಿಯನ್. ಇವರೀರ್ವರಿಂದ ನಾನು ತುಂಬಾ ಕಲಿತುಕೊಂಡಿದ್ದೇನೆ ಎಂದು ಡಾ.ಭಟ್ ಸ್ಮರಿಸಿಕೊಳ್ಳುತ್ತಾರೆ.
ಅಂದಹಾಗೆ ಅನೇಕರಿಗೆ ಗೊತ್ತಿಲ್ಲದ ಸಂಗತಿಯೊಂದಿದೆ. ಡಾ.ಭಟ್ ಓರ್ವ ಸಮರ್ಥ ಅಂಕಣಕಾರರಾಗಿಯೂ ಕೆಲಸ ಮಾಡಿದವರು. ಮಂಗಳೂರಿನಿಂದ ಪ್ರಕಟಗೊಳ್ಳುವ ಗ್ರಾಹಕ ಛಾಯಾ ಅನ್ನುವ ಜಿಲ್ಲಾಗ್ರಾಹಕ ವೇದಿಕೆಯ ಪತ್ರಿಕೆಗೆ ಎರಡು ವರ್ಷಗಳ ಕಾಲ ನಿರಂತರವಾಗಿ ಅಂಕಣ ಬರೆದಕೀರ್ತಿ ಇವರದು. ಅಂತೆಯೇ ಪುತ್ತೂರಿನ ಗ್ರಾಹಕ ವೇದಿಕೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ವಿವೇಕಾನಂದ ವಿದ್ಯಾರ್ಥಿ ನಿಲಯದಲ್ಲಿ ಆರು ವರ್ಷಗಳ ಕಾಲ ನಿಲಯ ಪಾಲಕರಾಗಿಯೂ ಕೆಲಸ ಮಾಡಿದ ಅನುಭವವುಳ್ಳ ವ್ಯಕ್ತಿ ಶ್ರೀಯುತರು. ಜೊತೆಗೆ ಕಾಲೇಜಿನ ವಿವಿಧ ಚಟುವಟಿಕೆಗಳಲ್ಲಿಯೂ ಇವರದು ಗಮನಾರ್ಹ ಸಾಧನೆ.
ಶ್ರೀಯುತರದು ಸಂತೃಪ್ತ ಸಂಸಾರ. 1985ರಲ್ಲಿ ಸಾಂಸಾರಿಕ ಜೀವನಕ್ಕೆ ಇವರು ಅಡಿಯಿರಿಸಿದರು. ಪತ್ನಿ ಶ್ರೀಮತಿ ಸರಸ್ವತಿ. ಇಬ್ಬರು ಮಕ್ಕಳು. ಹಿರಿಯ ಪುತ್ರ ಉದಯಕುಮಾರ್ ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ದ್ವಿತೀಯ ಪುತ್ರ ಮೋಹನ್‌ಕುಮಾರ್ ಇಲೆಕ್ಟ್ರಾನಿಕ್ಸ್‌ಇಂಜಿನಿಯರಿಂಗ್ ವಿದ್ಯಾರ್ಥಿ.
ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರಾಗಿ, ಪ್ರೀತಿಯ ಮಾರ್ಗದರ್ಶಕರಾಗಿ, ಮಾದರಿ ವ್ಯಕ್ತಿಯಾಗಿ ಕಾಲೇಜಿನ ಅಭಿವೃದ್ಧಿಗೆ ಶಕ್ತಿಮೀರಿ ದುಡಿದ ಸಾತ್ವಿಕ ಸಜ್ಜನ ಡಾ.ಪರಮೇಶ್ವರ ಭಟ್ ನಿವೃತ್ತಿಯಾಗುತ್ತಿರುವುದು ಕಾಲೇಜಿಗೆ ಬಹಳ ದೊಡ್ಡ ನಷ್ಟವೆಂದೇ ಹೇಳಬಹುದು. ಅನೇಕಾನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಮಹಾನ್ ಗುರುವೊಬ್ಬರು ಸರಿದು ಹೋಗುವ ಕಾಲ ಇದೀಗ ಸನ್ನಿಹಿತವಾಗಿದೆ. ಇದರೊಂದಿಗೆ ಕಾಲೇಜಿನ ಇತಿಹಾಸದಲ್ಲಿ ಪ್ರಮುಖ ಅಧ್ಯಾಯವೊಂದು ದಾಖಲಾಗುತ್ತಿದೆ.
ಲೇಖನ : ಡಾ.ಶ್ರೀಧರ ಎಚ್.ಜಿ ಮತ್ತು ರಾಕೇಶ್ ಕುಮಾರ್ ಕಮ್ಮಜೆ