ಸುಪ್ತ ಪ್ರತಿಭೆಗೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿ-ಡಾ.ಎಚ್.ಜಿ ಶ್ರೀಧರ
ಪುತ್ತೂರು: ವಿದ್ಯಾರ್ಥಿಗಳಿಗೆ ಕಲಿಕೆಯು ಜೀವನದ ಮಹತ್ತರವಾದ ಘಟ್ಟವಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡರೆ ಮುಂದಿನ ಜೀವನವು ಸುಗಮವಾಗಿರುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ಮಾತು ಆಯುಧವಿದ್ದಂತೆ. ಅದನ್ನು ಧನಾತ್ಮಕವಾಗಿ ಹಾಗೂ ಸಮರ್ಪಕವಾಗಿ ಬಳಸಿಕೊಂಡರೆ ಉತ್ತಮ ಎಂದು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ(ಸ್ವಾಯತ್ತ) ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜಿ ಶ್ರೀಧರ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ)ದ ಪತ್ರಿಕೊದ್ಯಮ ವಿಭಾಗ ಮತ್ತು ಐಕ್ಯೂಎಸಿ ವಿಭಾಗ ಆಯೋಜನೆ ಮಾಡಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಬೇರೆ ಬೇರೆ ತೆರನಾದ ಪ್ರತಿಭೆಗಳು ಹುದುಗಿಕೊಂಡಿರುತ್ತದೆ. ಆದರೆ ಅದಕ್ಕೆ ನೀವು ಅವಕಾಶಗಳನ್ನು ಬಳಸಿಕೊಂಡು ಪೂರಕವಾದ ವೇದಿಕೆಯನ್ನು ಕಲ್ಪಿಸಿಕೊಡಬೇಕು. ಇದರಿಂದ ನಿಮ್ಮ ಮುಂದಿನ ಭವಿಷ್ಯ ಸುಗಮವಾಗಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ.ಪಿ.ಆರ್ ನಿಡ್ಪಳ್ಳಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರಕ್ಕೆ ಇಂದು ಬಹಳಷ್ಟು ಬೇಡಿಕೆಯಿದೆ. ಉದ್ಯೋಗದ ದೃಷ್ಟಿಯಿಂದ ವಿದ್ಯಾರ್ಥಿಗಳು ಈ ಕೂಡಲೇ ಕರ‍್ಯೋನ್ಮುಖರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯಶ್ರೀ ಪಿ.ಕೆ ಹಾಗೂ ಮಣಿಕರ್ಣಿಕ ಕಾರ‍್ಯಕ್ರಮದ ಕಾರ‍್ಯದರ್ಶಿ ಧನುಷ್ ಉಪಸ್ಥಿತರಿದ್ದರು.
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಮಂಜುನಾಥ್ ಜೋಡುಕಲ್ಲು ಪ್ರಾಸ್ತಾವಿಸಿ ಸ್ವಾಗತಿಸಿದರು. ಅರಹಂತ ಜೈನ್ ವಂದಿಸಿ ಶುಭ್ರ ಪುತ್ರಕಳ ಕಾರ‍್ಯಕ್ರಮ ನಿರ್ವಹಿಸಿದರು.