ವಿವೇಕಾನಂದ ಕಾಲೇಜು ಪುತ್ತೂರು
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಪುತ್ತೂರು ತಾಲೂಕು ಪಶ್ಚಿಮ ಘಟ್ಟದ ಸೆರಗಿನಲ್ಲಿ ಬರುವ ಸ್ಥಳಗಳಲ್ಲಿ ಒಂದು.
ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ಪೂರ್ವಕ್ಕೆ ಸುಮಾರು 50 ಕಿಲೋಮೀಟರ್ ದೂರದಲ್ಲಿ ಬರುವ ಪುತ್ತೂರು ಕಂದಾಯ ಉಪವಿಭಾಗವಾಗಿ ಗುರುತಿಸಲ್ಪಟ್ಟಿದೆ.
ಬಂಟ್ವಾಳ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಪುತ್ತೂರು ಹೊರವಲಯದ ನೆಹರು ನಗರದಿಂದ ಒಂದು ಕಿಲೋಮೀಟರ್ ಒಳಗೆ ಬಂದರೆ ವಿವೇಕಾನಂದ ಕಾಲೇಜು ಸಿಗುತ್ತದೆ.
1915ರ ಕಾಲಘಟ್ಟದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವ ಸಲುವಾಗಿ ದೂರದ ಮಂಗಳೂರಿಗೆ ಹೋಗಬೇಕಾಗಿತ್ತು. ಈ ಸಂದರ್ಭದಲ್ಲಿ ಪುತ್ತೂರಿನ ಅನೇಕ ಹಿರಿಯ ಶಿಕ್ಷಣಾಭಿಮಾನಿಗಳು ಪುತ್ತೂರಿನಲ್ಲಿಯೇ ಒಂದು ಸೆಕೆಂಡರಿ ಶಾಲೆಯನ್ನು ಆರಂಭಿಸುವುದರ ಬಗೆಗೆ ಆಲೋಚಿಸಿ 1915ರಲ್ಲಿ ಮೊಳಹಳ್ಳಿ ಶಿವರಾಯರ ನೇತೃತ್ವದಲ್ಲಿ ಪುತ್ತೂರು ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿ 1916ರಲ್ಲಿ ಶಾಲೆಯೊಂದನ್ನು ಆರಂಭಿಸಿದರು. ಅನಂತರ 1921ರಲ್ಲಿ ಕಾರಣಾಂತರಗಳಿಮದ ಈ ಶಾಲೆಯನ್ನು ತಾಲೂಕು ಬೋರ್ಡಿಗೆ ವಹಿಸಿಕೊಡಲಾಯಿತು.
1964 ಹೊತ್ತಿಗೆ ಮತ್ತೊಮ್ಮೆ ಪುತ್ತೂರಿನಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಸಲುವಾಗಿ ಪುತ್ತೂರು ಎಜುಕೇಶನ್ ಸೊಸೈಟಿಯನ್ನು ಮತ್ತೊಮ್ಮೆ ಕ್ರಿಯಾಶೀಲಗೊಳಿಸಲಾಯಿತು.
ಕಾಲೇಜನ್ನು ಆರಂಭಿಸುವ ಸಲುವಾಗಿ ಸಮಾಲೋಚನೆಗಳು ನಡೆದು 12.07.1965ರಂದು ವಿವೇಕಾನಂದ ಕಾಲೇಜು ಸ್ಥಾಪನೆಯಾಯಿತು. ವರ್ತಮಾನದ ಅಗತ್ಯಕ್ಕೆ ಅನುಗುಣವಾಗಿ ಪುತ್ತೂರು ಎಜುಕೇಶನ್ ಸೊಸೈಟಿ ಎಂಬ ಹೆಸರನ್ನು 2009ರಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಎಂದು ಮರುನಾಮಕರಣಗೊಳಿಸಲಾಯಿತು.
ಇಂದು ಮಾತೃ ಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬರುವ ಹಲವು ಸಂಸ್ಥೆಗಳಲ್ಲಿ ವಿವೇಕಾನಂದ ಪದವಿ ಕಾಲೇಜು ಪ್ರಧಾನವಾಗಿ ಗುರುತಿಸಲ್ಪಟ್ಟಿದೆ.
ಕಳೆದ 54 ವರ್ಷಗಳಿಂದ ತನ್ನ ಪರಿಸರದ ಸಮಾಜಕ್ಕೆ ನಿಸ್ವಾರ್ಥ ಸೇವೆ ಮತ್ತು ಗುಣಮಟ್ಟದ ಶಿಕ್ಷಣವನ್ನು ಧಾರೆ ಎರೆಯುತ್ತಿದೆ. ಸುಮಾರು 30 ಸಾವಿರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂಬುದು ವಿವೇಕಾನಂದ ಕಾಲೇಜಿನ ಹಿರಿಮೆಯಾಗಿದೆ.
2004, 2011 ಮತ್ತು 2017ರಲ್ಲಿ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡಗಳು ಕಾಲೇಜಿನ ಮೂಲಭೂತ ಸೌಲಭ್ಯಗಳು, ಇಲ್ಲಿನ ಶಿಕ್ಷಣದ ಗುಣಮಟ್ಟ, ಫಲಿತಾಂಶ, ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆ ಮೊದಲಾದ ವಿಷಯಗಳ ಬಗೆಗೆ ಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕ್ರಮವಾಗಿ ಬಿ++, (2004) ಎ (3.12-2011) ಮತ್ತು 2017ರಲ್ಲಿ 3.30 ಅಂಕಗಳೊಂದಿಗೆ ಎ ಗ್ರೇಡ್ ಮಾನ್ಯತೆಯನ್ನು ನೀಡಿದೆ. ಇದು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಕ್ಷಣದ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.
ಪ್ರಸ್ತುತ ಕಾಲೇಜಿನಲ್ಲಿ ಪದವಿ ವಿಭಾಗದಲ್ಲಿ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಎಂ.ಕಾಂ., ಎಂ.ಎಸ್ಸಿ., ರಸಾಯನ ಶಾಸ್ತ್ರ, ಎಂ.ಎ. ಪತ್ರಿಕೋದ್ಯಮ ಮತ್ತು ಎಂ.ಎಸ್ಸಿ., ಗಣಿತಶಾಸ್ತ್ರ ವಿಭಾಗದಲ್ಲಿ ವಿಷಯದಲ್ಲಿ ಅಧ್ಯಯನ ಮಾಡಲು ಅವಕಾಶವಿದೆ. ಪ್ರಸ್ತುತ ಕಾಲೇಜಿನಲ್ಲಿ 110 ಮಂದಿ ಪ್ರಾಧ್ಯಾಪಕರು ಸೇವೆಯಲ್ಲಿದ್ದು, ಇವರಲ್ಲಿ 16 ಮಂದಿ ಡಾಕ್ಟರೇಟ್ ಪದವಿಯನ್ನೂ ಮತ್ತು 13 ಮಂದಿ ಎಂ.ಫಿಲ್., ಪದವಿಯನ್ನು ಪಡೆದಿದ್ದಾರೆ. ಇದರೊಂದಿಗೆ 16 ಮಂದಿ ಡಾಕ್ಟರೇಟ್ ಪದವಿಯನ್ನು ಪಡೆಯುವ ಸಲುವಾಗಿ ಅಧ್ಯಯನ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ 35 ಮಂದಿ ಶಿಕ್ಷಕೇತರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಆಡಳಿತಾತ್ಮಕ ವಿಷಯದಲ್ಲಿ ಇವರೆಲ್ಲರೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
2017ರಲ್ಲಿ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡವು ಕೊಟ್ಟ ಸಲಹೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ವಿದ್ಯಾರ್ಥಿ ಸಮೂಹಕ್ಕೆ ಶೈಕ್ಷಣಿಕವಾಗಿ ಮತ್ತಷ್ಟು ನೆರವನ್ನು ನೀಡುವುದರ ಮೂಲಕ ಕಲಿಕೆಯನ್ನು ಅರ್ಥಪೂರ್ಣವಾಗಿಸಲು ಶ್ರಮಿಸಲಾಗುತ್ತಿದೆ.
ಸ್ವಾಮಿ ವಿವೇಕಾನಂದರು ಹೇಳಿದಂತೆ ಶಿಕ್ಷಣವು ವ್ಯಕ್ತಿಯಲ್ಲಿ ಅದಾಗಲೇ ಇರುವ ಸಂಸ್ಕಾರವನ್ನು ಮತ್ತಷ್ಟು ಉತ್ಕøಷ್ಟತೆಯ ಕಡೆಗೆ ತೆಗೆದುಕೊಂಡು ಹೋಗುವುದೇ ಆಗಿದೆ ಎಂಬ ಧ್ಯೇಯ ವಾಕ್ಯದಂತೆ ಕಾಲೇಜು ಮುನ್ನಡೆಯುತ್ತಿದೆ.
ಉದ್ದೇಶಗಳು :
ಸಮಾಜ ಮತ್ತು ಕಾಲೇಜಿನ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮಾಜದ ಇನ್ನಿತರ ವ್ಯಕ್ತಿಗಳನ್ನು ಒಳಗೊಳ್ಳುವುದೇ ಆಗಿದೆ.
ಸಾಮಾಜಿಕ ಜವಾಬ್ದಾರಿಯ ವಾತಾವರಣವನ್ನು ಪರಿಸರದ ವ್ಯಕ್ತಿಗಳಲ್ಲಿ ಮೂಡಿಸುವುದು.
ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶವನ್ನು ಒದಗಿಸುವುದು.
ವಿದ್ಯಾರ್ಥಿಗಳನ್ನು ಪರಿಸರ ಮತ್ತು ಮಾನವ ಹಕ್ಕುಗಳ ವಿಷಯದಲ್ಲಿ ಜಾಗೃತರನ್ನಾಗಿ ಮಾಡುವುದು.
ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗೆಗೆ ಹೆಮ್ಮೆ ಪಡುವಂತೆ ಮಾಡುವುದು
ಕಲಿಕೆಯಲ್ಲಿ ವೈಜ್ಞಾನಿಕ ಮತ್ತು ಅನ್ವೇಷಣಾತ್ಮಕ ಗುಣವನ್ನು ಅಳವಡಿಸುವುದು
ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಂಶೋಧನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು.
ವಿದ್ಯಾರ್ಥಿಗಳಿಗೆ ವರ್ತಮಾನಕ್ಕೆ ಅಗತ್ಯವಿರುವ ಸ್ಪರ್ಧಾತ್ಮಕ ಕೌಶಲವನ್ನು ನೀಡುವುದು
ಹಿರಿಮೆ :
- ಯುಜಿಸಿಯಿಂದ ಕಾಲೇಜ್ ವಿತ್ ಪೊಟೆನ್‍ಶಿಯಲ್ ಫಾರ್ ಎಕ್ಸಲೆನ್ಸ್ ಮಾನ್ಯತೆ
- NIRF ನಿಂದ ರಾಷ್ಟ್ರಮಟ್ಟದಲ್ಲಿ 197ನೆಯ ರ್ಯಾಂಕ್
- ಯುಜಿಸಿಯಿಂದ ನ್ಯಾಕ್ ಮಾರ್ಗದರ್ಶಕ (ಮೆಂಟರ್) ಕಾಲೇಜು ಎಂಬ ಗೌರವ
- ನ್ಯಾಕ್‍ನಿಂದ 3.30 ಅಂಕಗಳೊಂದಿಗೆ ಎ ಗ್ರೇಡ್ ಮಾನ್ಯತೆ
ಸೌಲಭ್ಯಗಳು :
- ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ರೀತಿಯ ಬಾಂಧವ್ಯ
- ಮೌಲ್ಯಾಧಾರಿತ ಶಿಕ್ಷಣಕ್ಕೆ ವಿಶೇಷ ಆದ್ಯತೆ
- ವಿದ್ಯಾರ್ಥಿಗಳಿಗೆ ಶ್ರೇಷ್ಟವ್ಯಕ್ತಿಗಳ ಜೊತೆಗೆ ಸಂವಾದಕ್ಕೆ ಅವಕಾಶ
- ಕಲಿಕೆಗೆ ಉತ್ತಮ ಅವಕಾಶವಿರುವ ಪ್ರಶಾಂತ ವಾತಾವರಣ.
- ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ವಸತಿ ನಿಲಯಗಳು
- ಅನ್ನಪೂರ್ಣ ಉಚಿತ ಮಧ್ಯಾಹ್ನದ ಊಟದ ಯೋಜನೆ
- ಆಸನ ವ್ಯವಸ್ಥೆಯಿರುವ ವಿಶಾಲವಾದ ಕ್ರೀಡಾಂಗಣ
- ಅನುಭವೀ ಬೋಧಕ ವರ್ಗ
- ವಿವಿಧ ವಿದ್ಯಾರ್ಥಿ ವೇತನಗಳು
- ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಪ್ರೋತ್ಸಾಹ
- ವೈವಿಧ್ಯಮಯ ಅಧ್ಯಯನ ವಿಷಯಗಳು
- ವಿಶಾಲ ಹಾಗೂ ಅತ್ಯಾಧುನಿಕ ಪ್ರಯೋಗಾಲಯಗಳು
- ಮೀಡಿಯ ಸೆಂಟರ್ ಮತ್ತು ಪ್ರಾಚ್ಯ ವಸ್ತು ಸಂಗ್ರಹಾಲಯಗಳು
- ಪಠ್ಯೇತರ ಚಟುವಟಿಕೆಗಳಿಗೆ ವಿಪುಲ ಅವಕಾಶ
- ಸರ್ಟಿಫಿಕೇಟ್ ಕೋರ್ಸುಗಳು
- ಸುಸಜ್ಜಿತ ಗ್ರಂಥಾಲಯ
- ವೈ-ಫೈ ಕ್ಯಾಂಪಸ್
- ಉಜಿತ ಬ್ರೌಸಿಂಗ್ ಸೆಂಟರ್
- ಸುಸಜ್ಜಿತ ಸಭಾಂಗಣಗಳು
- ಪ್ರಾಥಮಿಕ ಆರೋಗ್ಯಕೇಂದ್ರ
- ಪ್ರತ್ಯೇಕ ಸ್ನಾತಕೋತ್ತರ ಕೇಂದ್ರ
- ಕ್ರಿಯಾಶೀಲ ಶಿಕ್ಷಕ ರಕ್ಷಕ ಸಂಘ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘ