ವಿವೇಕಾನಂದ ಕಾಲೇಜು, ಪುತ್ತೂರು

’ನ್ಯಾಕ್’‍ನಿಂದ "ಎ" ಶ್ರೇಣಿಯನ್ನು ಪಡೆದುಕೊಂಡಿರುವ ಸಂಸ್ಥೆ

College with Potential for Excellence (CPE) ಎಂದು ಯುಜಿಸಿಯಿ೦ದ ಗುರುತಿಸಲ್ಪಟ್ಟಿದೆ

| +91 8251 230 455 | English

ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

ಅಧ್ಯಕ್ಷರಾಗಿ ಸ್ವಸ್ಥಿಕ್, ಕಾರ್ಯದರ್ಶಿಯಾಗಿ ನಿಶಾಂತ್, ಜತೆಕಾರ್ಯದರ್ಶಿಯಾಗಿ ಲಿಖಿತಾ ಅವಿರೋಧ ಆಯ್ಕೆ

ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ೨೦೧೯-೨೦ನೇ ಸಾಲಿನ ವಿದ್ಯಾರ್ಥಿ ಸಂಘದ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತೃತೀಯ ಬಿ.ಕಾಂ ಬಿ ವಿಭಾಗದ ವಿದ್ಯಾರ್ಥಿ ಸ್ವಸ್ಥಿಕ್ ಕೆ.ಆರ್., ಕಾರ್ಯದರ್ಶಿಯಾಗಿ ತೃತೀಯ ಬಿಬಿಎ ವಿದ್ಯಾರ್ಥಿ ನಿಶಾಂತ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಬಿಎಸ್ಸಿ ’ಎ’ ವಿಭಾಗದ ವಿದ್ಯಾರ್ಥಿನಿ ಲಿಖಿತಾ ವಿ.ಕೆ. ಅವರು ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಕಾಲೇಜಿಗೆ ಸರ್ಕಾರದ ವಿವಿಧ ಸಂಸ್ಥೆಗಳಿಂದ ಮಾನ್ಯತೆಗಳು ಲಭಿಸಿರುವುದು ಶಿಕ್ಷಣ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ. ಇಂತಹ ಹಿರಿಮೆಯನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಮುಂದುವರಿಯುವುದು ಪ್ರತಿಯೊಬ್ಬ ವಿದ್ಯಾಥಿಯ ಜವಾಬ್ದಾರಿ. ಯಾವ ಸಂದರ್ಭದಲ್ಲೂ ಒತ್ತಡ, ಹತಾಶೆಗೆ ಒಳಗಾಗದೆ ದೃಢತೆಯಿಂದ ನಾಯಕತ್ವವನ್ನು ಮುಂದುವರೆಸಿಕೊಂಡು ಹೋಗಬೇಕು. ವಿದ್ಯಾರ್ಥಿವೃಂದ ಮತ್ತು ಕಾಲೇಜಿನ ವ್ಯವಸ್ಥೆಯ ನಡುವಣ ಕೊಂಡಿಯಾಗಿ ವಿದ್ಯಾರ್ಥಿ ಸಂಘ ಕಾರ್ಯನಿರ್ವಹಿಸಬೇಕು ಎಂದು ನುಡಿದರು.

ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ ಅವರ ವ್ಯಕ್ತಿತ್ವವನ್ನು ವೃದ್ಧಿಗೊಳಿಸುವತ್ತ ಮುಂದಡಿ ಇಡಬೇಕು. ಏಕೆಂದರೆ ವ್ಯಕ್ತಿತ್ವವನ್ನು ಹಣಕೊಟ್ಟು ಗಳಿಸಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಪಡೆಯುವ ಮುಖಾಂತರ ಎಲ್ಲರಿಗೂ ಪ್ರೀತಿಪಾತ್ರರಾಗಬೇಕು ಎಂದು ಕಿವಿಮಾತುಗಳನ್ನಾಡಿದರು. ಜೊತೆ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಯಾವುದೇ ರಾಜಕೀಯ ಇರಬಾರದು ಬದಲಾಗಿ ಇದೊಂದು ಜವಾಬ್ದಾರಿ ಎಂದು ತಿಳಿದು ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವ ಕೆಲಸವನ್ನು ವಿದ್ಯಾರ್ಥಿ ಸಂಘ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಪ್ರೊ. ಕೃಷ್ಣ ಕಾರಂತ, ಡಾ. ರೋಹಿಣಾಕ್ಷ, ಮೋತಿ ಬಾ, ರೇಖಾ ಪಿ., ವಿಜಯಲಕ್ಷ್ಮೀ, ಅತುಲ್ ಶೆಣೈ, ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು.