ವಿವೇಕಾನಂದ ಕಾಲೇಜು, ಪುತ್ತೂರು

’ನ್ಯಾಕ್’‍ನಿಂದ "ಎ" ಶ್ರೇಣಿಯನ್ನು ಪಡೆದುಕೊಂಡಿರುವ ಸಂಸ್ಥೆ

College with Potential for Excellence (CPE) ಎಂದು ಯುಜಿಸಿಯಿ೦ದ ಗುರುತಿಸಲ್ಪಟ್ಟಿದೆ

| +91 8251 230 455 | English

ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ – ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ವೃದ್ಧಿಸುವತ್ತ ಚಿಂತಿಸಿ: ಶ್ರೀನಿವಾಸ ಪೈ

ಪುತ್ತೂರು: ವಿದ್ಯಾರ್ಥಿಗಳು ಸ್ನಾತಕೋತ್ತರ ಅಧ್ಯಯನದ ಸಂದರ್ಭ ತಮ್ಮ ಪ್ರತಿಭೆಗಳನ್ನು ಬೆಳೆಸುವತ್ತ ಗಮನವನ್ನು ಕೇಂದ್ರೀಕರಿಸಬೇಕು. ಜೊತೆಗೆ ಉಪನ್ಯಾಸಕರ ಮಾರ್ಗದರ್ಶನವನ್ನು ಪಡೆದುಕೊಳ್ಳುವ ಮೂಲಕ ತಮ್ಮನ್ನು ತಾವು ಸಮಾಜದ ಮುಂದೆ ತೆರೆದಿಡುವ ಕೆಲಸವನ್ನು ಮಾಡಬೇಕು. ಈ ಪ್ರವೃತ್ತಿ ವೃತ್ತಿ ಜೀವನದಲ್ಲಿ ಮುಂದುವರೆಯಲು ಸಹಕಾರಿಯಾಗುವುದು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಅಭಿಪ್ರಾಯಪಟ್ಟರು.

ಅವರು ಜು.೧೬ ರಂದು ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲೇಜಿನಲ್ಲಿರುವ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತರಗತಿಯ ಬಿಡುವಿನ ಸಮಯದಲ್ಲಿಯೂ ಜ್ಞಾನವನ್ನು ವೃದ್ಧಿಸುವ ಕೆಲಸಕ್ಕೆ ಮುಂದಾಗಬೇಕು. ಇದರೊಂದಿಗೆ ನೈತಿಕ ಶಿಕ್ಷಣವನ್ನು ಪಡೆಯುವುದು ಮಾತ್ರವಲ್ಲದೆ ಸಮಾಜವನ್ನು ಅರಿಯುವ ಕಾರ್ಯದಲ್ಲಿ ತೊಡಗಬೇಕು. ಮಾತ್ರವಲ್ಲದೆ ವಿದ್ಯಾರ್ಥಿಗಳು ವೃತ್ತಿ ಜೀವನಕ್ಕೆ ಕಾಲಿಡುವ ಸಂದರ್ಭ ಕಾಲೇಜಿನ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣವೇ ಮುಂದಿನ ಜೀವನದ ಅರ್ಹತೆಯಾಗಿರುತ್ತದೆ. ಆದ್ದರಿಂದ ಕಾಲೇಜಿನಲ್ಲಿ ದೊರೆಯುವ ಜ್ಞಾನದೊಂದಿಗೆ ತಿಳಿವಳಿಕೆಯನ್ನು ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಜೀವನದಲ್ಲಿ ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಇದರೊಂದಿಗೆ ಜೀವನದಲ್ಲಿ ಗುರಿ ಮುಟ್ಟುವ ಕೆಲಸವನ್ನು ಮಾಡಬೇಕು ಎಂದರು.

ವಿವೇಕಾನಂದ ಕಾಲೇಜಿಗೆ ಪ್ರಸ್ತುತ ೫೪ ವರ್ಷಗಳ ಇತಿಹಾಸವಿದೆ. ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡುವ ಕೆಲಸವನ್ನು ಕಾಲೇಜು ಮಾಡುತ್ತಿದೆ. ಇದಕ್ಕೆ ಕಾಲೇಜಿನ ಆಡಳಿತ ಮಂಡಳಿಯವರ ಶ್ರಮ ಹಾಗೂ ಶಿಕ್ಷಣ ಪ್ರೇಮಿಗಳ ಸಹಕಾರ ಗಣನೀಯವಾದದ್ದು. ಆದ್ದರಿಂದ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯವನ್ನು ನೀಡುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲ ಮಾರ್ಗದರ್ಶನವನ್ನು ಕಾಲೇಜಿನಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ. ಜಯರಾಮ ಭಟ್ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ದೊರೆಯುವ ಪ್ರತಿಯೊಂದು ಅವಕಾಶಗಳನ್ನು ಉಪಯೋಗಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು ಎಂದು ಶುಭಹಾರೈಸಿದರು.

ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ಸಂಯೋಜಕಿ ಡಾ. ವಿಜಯಸರಸ್ವತಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಅಂತಃಕರಣದ ಬುದ್ಧಿವಂತಿಕೆಯನ್ನು ಹೊರಹಾಕುವಂತಹ ಶಿಕ್ಷಣವನ್ನು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮೂಲಕ ನೀಡಲಾಗುತ್ತಿದೆ. ಇದರೊಂದಿಗೆ ಸಮಾಜದಲ್ಲಿ ಒಬ್ಬ ವ್ಯಕ್ತಿ ಹೇಗಿರಬೇಕೆಂಬ ಜೀವನ ಮೌಲ್ಯವನ್ನು ಶಿಕ್ಷಣದ ಮೂಲಕ ಮಾರ್ಗದರ್ಶನವನ್ನು ನೀಡಲಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿನಿಗಳಾದ ದೀಪಪ್ರಸನ್ನ, ಅಶಿತಾ ಪ್ರಾರ್ಥಿಸಿದರು. ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಸಂಯೋಜಕ ಡಾ. ಕಾರಂತ ವಿಜಯಗಣಪತಿ ರಮೇಶ್ ವಂದಿಸಿದರು. ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ಉಪನ್ಯಾಸಕಿಯರಾದ ಅನನ್ಯಾ ವಿ., ಸುಷ್ಮಿತಾ ಜೆ. ಕಾರ್ಯಕ್ರಮ ನಿರೂಪಿಸಿದರು.