ವಿವೇಕಾನಂದ ಕಾಲೇಜು, ಪುತ್ತೂರು

’ನ್ಯಾಕ್’‍ನಿಂದ "ಎ" ಶ್ರೇಣಿಯನ್ನು ಪಡೆದುಕೊಂಡಿರುವ ಸಂಸ್ಥೆ

College with Potential for Excellence (CPE) ಎಂದು ಯುಜಿಸಿಯಿ೦ದ ಗುರುತಿಸಲ್ಪಟ್ಟಿದೆ

| +91 8251 230 455 | English

ವಿವೇಕಾನಂದದ ಐಟಿ ಕ್ಲಬ್ ನಿಂದ ಕಂಪ್ಯೂಟಿಂಗ್ ಬೇಸಿಕ್ಸ್ ಕುರಿತು ಉಪನ್ಯಾಸ

ಪುತ್ತೂರು: ಗಣಕಯಂತ್ರ ಎನ್ನುವುದು ದತ್ತಾಂಶದ ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ  ಎಂದು ವಿಪ್ರೋ ಕಂಪೆನಿಯ ಟ್ರೈನಿ ಉದ್ಯೋಗಿ ನಿಶಾಂತ್ ಭಟ್ ಹೇಳಿದರು.

ಅವರು  ಇಲ್ಲಿನ ವಿವೇಕಾನಂದ ಕಾಲೇಜಿನ ಐಟಿ ಕ್ಲಬ್ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಕಂಪ್ಯೂಟಿಂಗ್  ಬೇಸಿಕ್ಸ್ ವಿಷಯದ ಬಗೆಗೆ ಮಾಹಿತಿ ನೀಡಿದರು.

 

 

ಕಂಪ್ಯೂಟರ್ ಒಳ ರವಾನೆ ಸಂಸ್ಕರಣೆ ಹಾಗೂ ಹೊರ ರವಾನೆಯ ಸಾಧನಗಳನ್ನು, ಹೊಂದಿದ್ದು, ಒಳರವಾನೆಯ ಸಾಧನಗಳ ಮೂಲಕ ನೀಡಿದಂತಹ ಮಾಹಿತಿಯನ್ನು ಸಂಸ್ಕರಿಸಿ ಹೊರರವಾನೆ ಸಾಧನಗಳ ಮೂಲಕ ಜನರಿಗೆ ನೀಡುತ್ತದೆ. ಅಲ್ಲದೇ ಸಂಪರ್ಕಜಾಲದ ಮುಖಾಂತರ ಆದೇಶದ ಮೇರೆಗೆ ಒಂದು ಗಣಕಯಂತ್ರದಿಂದ ಮತ್ತೊಂದು ಗಣಕಯಂತ್ರಕ್ಕೆ ದತ್ತಾಂಶಗಳನ್ನು ರವಾನಿಸುತ್ತದೆ ಎಂಬುದಾಗಿ ವಿವರಿಸಿದರು.

ಮುಖ್ಯವಾಗಿ ಕಂಪ್ಯೂಟರ್ ಕಾರ್ಯ ನಿರ್ವಹಿಸಬೇಕಾದರೆ ಸಿಸ್ಟಮ್ ಸಾಫ್ಟ್‌ವೇರ್‌ನ ಅಗತ್ಯತೆ ಇದೆ. ಒಪರೇಟಿಂಗ್ ಸಿಸ್ಟಮ್ ಎನ್ನುವ ಸಿಸ್ಟಮ್ ಸಾಫ್ಟ್‌ವೇರ್, ಹಾರ್ಡ್‌ವೇರ್ ಮತ್ತು ಮನುಷ್ಯನ ಸಂಭಾಷಣೆಗೆ ಸಹಾಯಕವಾಗಿದೆ. ಅಲ್ಲದೆ ಹಲವಾರು ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳು ಲಭ್ಯವಿದ್ದು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಸಹಾಯಕವಾಗಿದೆ. ಕಂಪ್ಯೂಟರ್ ಸಹಾಯದಿಂದ ರೂಪಿಸಿದ ಮಾಹಿತಿಯನ್ನು ಅದರ ಮೆಮೊರಿಯಲ್ಲಿ ಶೇಖರಿಸಿಡುವುದು ಸಾಧ್ಯ ಎಂದರಲ್ಲದೆ ವಿವಿಧ ವಿಧವಾದ ಮೆಮೊರಿಗಳ ಪರಿಚಯವನ್ನೂ ಮಾಡಿಕೊಟ್ಟರು.

ವಿವಿಧ ಕಂಪ್ಯೂಟರ್‌ಗಳು, ಅದರ ಉಪಯೋಗಗಳ ವಿಚಾರವಾಗಿ ಚರ್ಚೆ ನಡೆಸಲಾಯಿತು. ವಿದ್ಯಾರ್ಥಿಗಳೊಂದಿಗಿನ ಮಾತುಕತೆಯಲ್ಲಿ ದೂರಸಂಪರ್ಕ, ಶಿಕ್ಷಣ, ಆರೋಗ್ಯ, ವಿಜ್ಞಾನ, ಕೃಷಿ, ಬ್ಯಾಂಕಿಂಗ್, ಜೀವವಿಮೆ, ಕೋರ್ಟು-ಕಛೇರಿ, ವ್ಯಾಪಾರ, ಕಾರ್ಖಾನೆ, ಚಲನಚಿತ್ರ, ಮುದ್ರಣ, ವ್ಯವಹಾರ, ಮನರಂಜನೆ, ಸಂಶೋಧನೆ ಮುಂತಾದ ಬಳಕೆಯ ವಿಚಾರಗಳಲ್ಲಿ ಅಭಿಪ್ರಾಯ ವಿನಿಮಯ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಪ್ರಕಾಶ್‌ಕುಮಾರ್, ಉಪನ್ಯಾಸಕರಾದ ಗುರುಕಿರಣ್ ಭಟ್ ಹಾಗೂ ಶ್ವೇತಲಕ್ಷ್ಮಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಮೂಲ್ಯ ಹಾಗೂ ದಿಶಾ ಕಾರ್ಯಕ್ರಮ ನಿರೂಪಿಸಿದರು.