ವಿವೇಕಾನಂದ ಕಾಲೇಜು, ಪುತ್ತೂರು

’ನ್ಯಾಕ್’‍ನಿಂದ "ಎ" ಶ್ರೇಣಿಯನ್ನು ಪಡೆದುಕೊಂಡಿರುವ ಸಂಸ್ಥೆ

College with Potential for Excellence (CPE) ಎಂದು ಯುಜಿಸಿಯಿ೦ದ ಗುರುತಿಸಲ್ಪಟ್ಟಿದೆ

| +91 8251 230 455 | English

ವಿವೇಕಾನಂದ ಕಾಲೇಜು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ವಿಶ್ವದೆಲ್ಲೆಡೆ ಯೋಗದ ಮಹತ್ವ ಪಸರಿಸಿದೆ: ಡಾ.ಉದಯ ಕುಮಾರ್ ಕೆ.

ಪುತ್ತೂರು: ಪ್ರಸ್ತುತ ಯೋಗವನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಅಂತಾರಾಷ್ಟ್ರೀಯ ಯೋಗ ದಿನದ ಫಲವಾಗಿ ವಿಶ್ವದಾದ್ಯಂತ ಯೋಗದ ಕುರಿತಾದ ಜಾಗೃತಿ ಹೆಚ್ಚಾಗುತ್ತಿದೆ. ಯೋಗದಿಂದಾಗಿ ಆರೋಗ್ಯದಲ್ಲಾಗುವ ಸಾತ್ವಿಕ ಬದಲಾವಣೆಯೇ ಇದಕ್ಕೆ ಕಾರಣ. ಆದ್ದರಿಂದ ಸಕಲ ರೋಗಗಳಿಗೂ ಪರಿಹಾರದಂತಿರುವ ಯೋಗವನ್ನು ಎಲ್ಲರು ದಿನನಿತ್ಯ ಜೀವನದಲ್ಲಿ ಅಭ್ಯಾಸ ಮಾಡಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗದ ಉಪನ್ಯಾಸಕ ಡಾ.ಉದಯಕುಮಾರ್ ಕೆ. ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ., ಸ್ನಾತಕೋತ್ತರ ವಾಣಿಜ್ಯ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್‍ಸ್ ಮತ್ತು ರೇಂಜರ್‍ಸ್ ಘಟಕಗಳ ಆಶ್ರಯದಲ್ಲಿ ಜರಗಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶುಕ್ರವಾರ ಮಾತನಾಡಿದರು.

ಯೋಗದ ವಿಷಯದಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಯೋಗ ಎಂದರೆ ಕೇವಲ ವ್ಯಾಯಾಮದ ಪದ್ಧತಿಯಲ್ಲ. ಯೋಗ ಆಸನ, ಪ್ರಾಣಾಯಾಮಗಳಿಗೆ ಸೀಮಿತವಾದದ್ದೂ ಅಲ್ಲ. ಅವೆಲ್ಲವನ್ನು ಒಳಗೊಂಡ ಸಮಗ್ರತೆಯೇ ಯೋಗ. ಯೋಗಕ್ಕೆ ವೈಜ್ಞಾನಿಕ ತಳಹದಿಯೂ ಇದೆ ಎಂದರು.

ನಮ್ಮ ಆಯುಷ್ಯವನ್ನು ನಿರ್ಧರಿಸುವುದು ನಮ್ಮ ಉಸಿರಾಟ ಕ್ರಿಯೆ. ನಾವು ಉಸಿರಾಡುವ ಗಾಳಿಯ ಅಶುದ್ಧತೆಯನ್ನು ಕ್ಷಯ ಮಾಡುವ ಶಕ್ತಿ ಯೋಗಕ್ಕಿದೆ. ಮನಸನ್ನು ನಿಗ್ರಹಿಸುವ ಸುಲಭ ಮಾರ್ಗಯೋಗ. ಮನೋದೈಹಿಕ ಸಮಸ್ಯೆಗಳೆರಡಕ್ಕೂ ಪರಿಹಾರ ಒದಗಿಸುವ ಸಾಮರ್ಥ್ಯವನ್ನು ಯೋಗ ಹೊಂದಿದೆ. ಆದ್ದರಿಂದ ಯೋಗ ನಮ್ಮ ಜೀವನದ ಭಾಗವಾದರೆ ನಮಗೇ ಶ್ರೇಯಸ್ಸು ಎಂದು ನುಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಯೋಗ ಉತ್ತಮವಾದ ಪರಿಹಾರ ಮಾರ್ಗ. ಮನಸ್ಸನ್ನು ಹತೋಟಿಗೆ ತರಲು ಯೋಗ ಸಹಕಾರಿ. ಮೆದುಳಿಗೆ ಸಹಕಾರಿಯಾಗುವ ಅನೇಕ ಆಸನಗಳಿವೆ. ವಿದ್ಯಾರ್ಥಿಗಳು ಅವುಗಳನ್ನು ಅಭ್ಯಾಸ ಮಾಡಬೇಕು. ಯೋಗ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿನಿ ಶ್ರಾವ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಶ್ರೀನಾಥ್ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕಿ ವಿದ್ಯಾ ಕೆ.ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.