ಉದ್ಯೋಗಕ್ಕೆ ಸೇರಲು ತರಬೇತಿ ಮುಖ್ಯ : ಜಯರಾಮ ಭಟ್
ಪುತ್ತೂರು :ಯಾವುದೇ ಸಂಸ್ಥೆಗೆ ಸೇರಬೇಕಾದರೆ ತರಬೇತಿ ಬಹುಮುಖ್ಯ. ಕೆಲವೊಂದು ಸಂಸ್ಥೆಗಳಲ್ಲಿ ಅವರೇ ತರಬೇತಿ ನೀಡಿದರೆ ಇನ್ನುಳಿದಂತೆ ಹಲವು ಕಡೆಗಳಿಗೆ ನಾವೇ ಪೂರ್ವ ತಯಾರಿ ನಡೆಸಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ. ಜಯರಾಮ ಭಟ್ ಹೇಳಿದರು.
ಅವರು ಇಲ್ಲಿ ವಿವೇಕಾನಂದ ಕಾಲೇಜಿನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಆಶ್ರಯದಲ್ಲಿ ವಾಣಿಜ್ಯ ಮತ್ತು ವ್ಯವಹಾರ ವಿಭಾಗ ಆಯೋಜಿಸಿದ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತರಬೇತಿದಾರ ಶಾಂತ ಪ್ರಿಯ ಮಾತನಾಡಿ, ದೇಶದಲ್ಲಿ ಜನಸಂಖ್ಯಾಸ್ಪೋಟದಿಂದಾಗಿ ಉದ್ಯೋಗದ ಕೊರತೆ ಎದ್ದು ಕಾಣುತ್ತಿದೆಯಾದರೂ ಯಾರಲ್ಲೂ ಈ ದೇಶಕ್ಕೆ ಏನು ಕೊಡಬೇಕು ಎಂಬ ಅಲೋಚನೆ ಮೂಡುವುದಿಲ್ಲ. ಕೌಶಲ್ಯ ವಿಕಾಸಯೋಜನೆ ತರಬೇತಿಯ ಎಲ್ಲಾ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ, ಇದರಿಂದಾಗಿ ವಿದ್ಯಾರ್ಥಿಯು ಉಚಿತವಾಗಿ ತರಬೇತಿ ಪಡೆದು ಸೂಕ್ತ ಉದ್ಯೋಗಕ್ಕೆ ಸೇರಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಫ್ರಭಾಕರ್ ಮಾತನಾಡಿ, ಪ್ರತಿಯೊಬ್ಬರಲ್ಲೂ ಜ್ಞಾನ, ತಿಳುವಳಿಕೆ ಮತ್ತು ಕೌಶಲ್ಯ ಇದೆ. ಸೂಕ್ತವಾದ ಉದ್ಯೋಗಕ್ಕೆ ನಮ್ಮಲ್ಲಿರುವ ಕೌಶಲ್ಯ ಉಪಯುಕ್ತವಾಗಬೇಕಾದರೆ ಸರಿಯಾದ ತರಬೇತಿ ಅಗತ್ಯ. ಈ ಯೋಜನೆಯಲ್ಲಿ ವಿದ್ಯಾರ್ಥಿಗಳ ಪಾಲು ಹೆಚ್ಚಿನದ್ದು ಎಂದು ಹೇಳಿದರು.
ಉಪನ್ಯಾಸಕಿ ರೇಖಾ ಉಪಸ್ಥಿತಿಯಿದ್ದರು. ವಿಭಾಗದ ಮುಖ್ಯಸ್ಥ, ಪ್ರೊ. ಬಿ.ವೆಂಕಟ್ರಮಣ ಭಟ್ ಸ್ವಾಗತಿಸಿದರು ಹಾಗು ವಿಭಾಗದ ಉಪನ್ಯಾಸಕಿ ನಿವೇದಿತಾ ಎಸ್.ಪಿ. ವಂದಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.