ಕಾವ್ಯದಲ್ಲಿ ಲಯ ಮತ್ತು ಲಾಸ್ಯವಿರಬೇಕು : ಡಾ. ಶ್ರೀಧರ ಎಚ್.ಜಿ.
ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ನಾನಾ ತೆರೆನಾದ ಭಾವನೆಗಳಿರುತ್ತದೆ. ಅದು ಸಮಯ, ಸಂದರ್ಭಕ್ಕೆ ತಕ್ಕಂತೆ ಬರಹವಾಗಿ ವ್ಯಕ್ತವಾಗುತ್ತದೆ. ಕಾವ್ಯವು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲಾಗದ ಆನಂದದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಒಳಗೊಂಡಿರುತ್ತದೆ. ಇಂತಹ ಕಾವ್ಯದಿಂದ ದುಷ್ಟ ಮನಸ್ಸುಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಮನಪರಿವರ್ತಿಸಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ. ಶ್ರೀಧರ ಎಚ್.ಜಿ. ಹೇಳಿದರು.
ಅವರು ಕಾಲೇಜಿನ ತೃತೀಯ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಸಾಹಿತ್ಯಮಂಟಪ – ಸಾಹಿತ್ಯ ಪ್ರಿಯ ಮನಗಳ ಸಂಮಿಲನದಲ್ಲಿ ಉಪನ್ಯಾಸಕರಿಗಾಗಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.
ಕೇಳಲು ಇಂಪೆನಿಸುವ ಸಿನಿಮಾ ಹಾಡುಗಳಲ್ಲಿಯೂ ಪ್ರಸ್ತಾರವಿದೆ. ಒಂದು ಹಾಡು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕಾದರೆ ಲಯ ಮತ್ತು ಲಾಸ್ಯವಿರಬೇಕು. ಬರಹದಲ್ಲಿ ಮನಸ್ಸಿಗೆ ಆಪ್ಯಾಯಮಾನವಾದ ಒಂದು ಪದವಿದ್ದರೂ ಕಾವ್ಯವಾಗುತ್ತದೆ ಎಂದು ಭಾರತೀಯ ಕಾವ್ಯ ಮೀಮಾಂಸಕರು ಅಭಿಪ್ರಾಯ ಪಟ್ಟಿದ್ದಾರೆ. ಕಾವ್ಯವು ಇರುವುದನ್ನು ನೇರವಾಗಿ ಹೇಳದೇ ವ್ಯತಿರಿಕ್ತವಾಗಿ ಹೇಳುತ್ತದೆ ಎಂದು ತಿಳಿಸಿದರು.
ಕಾವ್ಯದಲ್ಲಿ ಬರುವ ಶಬ್ಧಕ್ಕಿಂತ ಮೌನವೂ ಮಹತ್ತರವಾದ ಅರ್ಥವನ್ನು ನೀಡಬಲ್ಲ ಸಾಮಥ್ಯವನ್ನು ಹೊಂದಿದೆ. ಉದಾಹರಣೆಗೆ ಆದಿಕವಿ ಪಂಪ ಕುರುಕ್ಷೇತ್ರ ಯುದ್ಧದಿಂದ ಸಂಭವಿಸಿದ ರಕ್ತಪಾತವನ್ನು ವಿವರಿಸಲು ಬಳಸಿದ ಒಂದೊಂದು ಪದವೂ ಮಹತ್ತರವಾದ ಅರ್ಥವನ್ನು ನೀಡುತ್ತದೆ. ಕಾವ್ಯದೊಳಗೆ ಹುದುಗಿರುವ ಸೌಂದರ್ಯವನ್ನು ಕಲ್ಪಿಸಿಕೊಳ್ಳುವುದರಲ್ಲಿಯೂ ಸಂತಸವಿದೆ. ಕಾವ್ಯದ ಯಶಸ್ಸಿಗೆ ಕವಿ ಎಷ್ಟು ಮುಖ್ಯವೋ ಅಂತೆ ಓದುಗನೂ ಮುಖ್ಯ ಎಂದರು.
ಉಪನ್ಯಾಸಕರಾದ ಡಾ. ಗೀತಾ ಕುಮಾರಿ ಟಿ., ಸರಸ್ವತಿ ಸಿ.ಕೆ., ಭವ್ಯ ಪಿ. ಆರ್. ನಿಡ್ಪಳ್ಳಿ ಮತ್ತು ಕಛೇರಿ ಸಹಾಯಕ ನಾರಾಯಣ ತಮ್ಮ ಸ್ವರಚಿತ ಬರಹಗಳ ನಿವೇದನೆಯನ್ನು ಮಾಡಿದರು. ವೇದಿಕೆಯಲ್ಲಿ ಕಾರ್ಯಕ್ರಮದ ಕಾರ್ಯದರ್ಶಿ ವಿನೋದ್ ಕುಮಾರ್ ಕಂದೂರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಿಯಾ ಕೆ.ಎಸ್. ಸ್ವಾಗತಿಸಿ, ಪ್ರಿಯಾಶ್ರೀ ಕೆ.ಎಸ್. ಪ್ರಾರ್ಥಿಸಿದರು. ಕಾವ್ಯಶ್ರೀ ವಂದಿಸಿದರು. ಸುಷ್ಮ ಕಾರ್ಯಕ್ರಮ ನಿರ್ವಹಿಸಿದರು.