ಗಣಿತದ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯ: ಡಾ.ಗೋವಿಂದೇ ಗೌಡ
ಪುತ್ತೂರು: ಗಣಿತದ ಬಗೆಗಿನ ಮೂಲಭೂತ ಜ್ಞಾನ ಪ್ರತಿಯೊಬ್ಬನಿಗೂ ಅಗತ್ಯ. ವಿವಿಧ ಕ್ಷೇತ್ರಗಳಲ್ಲಿ ಗಣಿತ ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ. ಕೇವಲ ತರಗತಿಯ ಪಠ್ಯದಿಂದ ಗಣಿತದ ಬಗೆಗಿನ ಜ್ಞಾನ ವೃದ್ಧಿಯಾಗುವುದಿಲ್ಲ. ಪಠ್ಯದ ಹೊರತಾಗಿಯೂ ಗಣಿತದ ಬಗೆಗಿನ ಚಿಂತನೆ ನಮ್ಮನ್ನು ಎತ್ತರಕ್ಕೇರಿಸಬಲ್ಲುದು ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪರಾಚಾರ್ಯ ಡಾ.ಎಂ.ಎಸ್.ಗೋವಿಂದೇ ಗೌಡ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಗಣಿತ ಶಾಸ್ತ್ರ ವಿಭಾಗ ಯುಜಿಸಿ ಪ್ರಾಯೋಜಕತ್ವದಲ್ಲಿ ಶನಿವಾರ ಆಯೋಜಿಸಿದ ಒಂದು ದಿನದ ರಾಷ್ಟ್ರ ಮಟ್ಟದ ಗಣಿತ ಶಾಸ್ತ್ರ ಸಂಬಂಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಗಣಿತವನ್ನು ಅಭ್ಯಸಿಸುವುದಕ್ಕೆ ನಮ್ಮನ್ನು ನಾವು ಅದಕ್ಕೆ ಒಪ್ಪಿಸಿಕೊಳ್ಳಬೇಕು. ಮಾತ್ರವಲ್ಲದೆ ಈ ಕ್ಷೇತ್ರದ ಕಲ್ಪನೆಗಳನ್ನು ಅರ್ಥೈಸಿಕೊಳ್ಳುವ ದೃಷ್ಟಿಯಿಂದ ಅಧ್ಯಯನ ನಡೆಯಬೇಕೇ ಹೊರತು ಪರೀಕ್ಷಾ ದಋಷ್ಟಿಯಿಂದಲ್ಲ. ಕಾರ್ಯಾಗಾರಗಳು ಗಣಿತದ ಅಭ್ಯಾಸಕ್ಕೆ ಉಪಯುಕ್ತವಾಗಬಲ್ಲವು ಎಂದರು
ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ವಿದ್ಯಾರ್ಥಿಗಳು ಭಾರತೀಯ ಗಣಿತದ ಬಗೆಗೆ, ಗಣಿತಜ್ಞರ ಕುರಿತಾಗಿ ಹೆಚ್ಚಿನ ಅಧ್ಯಯನ ನಡೆಸಬೇಕು. ಈ ದೇಶದ ಗಣಿತದ ಬಗೆಗಿನ ನಿರ್ಲಕ್ಷತೆ ನಮ್ಮಲ್ಲಿರುವುದೇ ನಮ್ಮಲ್ಲಿ ಗಣಿತದ ಅಭಿವೃದ್ಧಿಗೆ ತೊಡಕಾಗಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ದೈನಂದಿನ ಬದುಕಿನಲ್ಲಿ ಗಣಿತ ಹಾಸುಹೊಕ್ಕಂತಿದೆ. ಗಣಿತದ ಹೊರತಾದ ಬದುಕನ್ನು ನಿರೀಕ್ಷಿಸುವುದು ಕಷ್ಟ ಎಂದು ಹೇಳಿದರು. ವೇದಿಕೆಯಲ್ಲಿ ಮೈಸೂರು ವಿಶ್ವವಿದ್ಯಾನಿಯದ ಗಣಿತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ರಂಗಸ್ವಾಮಿ ಎಚ್.ಎನ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ವಿದ್ಯಾಲಕ್ಷ್ಮಿ ಕೆ.ಆರ್, ಪ್ರಿಯಾ ಎಂ.ಜಿ ಹಾಗೂ ಶ್ರೀಲಕ್ಷ್ಮಿ ಪ್ರಾರ್ಥಿಸಿದರು. ಕಾಲೇಜಿನ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಂಕರ ನಾರಾಯಣ ಭಟ್ ಸ್ವಾಗತಿಸಿದರು. ವಿಭಾಗದ ಪ್ರಾಧ್ಯಾಪಕಿ ದೇವೀರಮ್ಮ ವಂದಿಸಿದರು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶಿವಪ್ರಸಾದ್ ಕೆ.ಎಸ್ ಕಾರ್ಯಕ್ರಮ ನಿರ್ವಹಿಸಿದರು.