ಗ್ರಾಮವಿಕಾಸದ ಪರಿಕಲ್ಪನೆಗೆ ಗ್ರಾಮೀಣ ಪತ್ರಿಕೋದ್ಯಮ ಪೂರಕ : ಶಿವಪ್ರಸಾದ್ ರೈ ಪೆರುವಾಜೆ
ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಪರ್ತಕತ್ರ ಮೇಷ್ಟುç ಕಾರ್ಯಕ್ರಮ
ಪುತ್ತೂರು. ಜು.18: ಪ್ರಸ್ತುತ ಪತ್ರಿಕೋದ್ಯಮ ಕ್ಷೇತ್ರವು ಗ್ರಾಮೀಣ ಪ್ರದೇಶದ ಜನಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದ ಸುದ್ದಿಗಳನ್ನು ಮುನ್ನೆಲೆಗೆ ತರುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಗ್ರಾಮವಿಕಾಸದ ಪರಿಕಲ್ಪನೆಯಿಂದ ಸ್ವಸ್ಥ ಸದೃಢ ಸಮಾಜದ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪತ್ರಿಕೋದ್ಯಮ ಕ್ಷೇತ್ರವು ಕಾರ್ಯತತ್ಪರವಾಗಿದೆ ಎಂದು ಪುತ್ತೂರಿನ ಸುದ್ದಿಬಿಡುಗಡೆ ಪತ್ರಿಕೆಯ ಪತ್ರಕರ್ತ ಶಿವಪ್ರಸಾದ್ ರೈ ಪೆರುವಾಜೆ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತ ಮೇಷ್ಟ್ರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಸೋಮವಾರ ಮಾತನಾಡಿದರು. ಗ್ರಾಮೀಣ ಪತ್ರಿಕೋದ್ಯಮ ಪತ್ರಿಕಾ ರಂಗಕ್ಕಷ್ಟೇ ಸೀಮಿತವಾಗದೆ ದೃಶ್ಯ ಮತ್ತು ಡಿಜಿಟಲ್ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಓರೆಗಚ್ಚುವ ಕಾರ್ಯ ಪತ್ರಿಕೋದ್ಯಮದಿಂದಾಗುತ್ತಿದ್ದು, ಜನಸಾಮಾನ್ಯರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲೂ ಹಲವು ಸವಾಲುಗಳಿದ್ದು ಅವೆಲ್ಲವನ್ನೂ ನಿಭಾಯಿಸುವ ಚಾಕಚಕ್ಯತೆಯನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಶ್ರೀಪ್ರಿಯ ಪಿ, ಭರತ್ ಕೋಲ್ಪೆ, ಭರತ್ ಶೆಟ್ಟಿ ಕುಂದಾಪುರ, ಕಾರ್ಯಕ್ರಮದ ಕಾರ್ಯದರ್ಶಿ ಅರುಣ್ ಕಿರಿಮಂಜೇಶ್ವರ ಉಪಸ್ಥಿತರಿದ್ದರು.
ಈ ಸಂದರ್ಭ ಗ್ರಾಮೀಣ ಪತ್ರಿಕೋದ್ಯಮದಲ್ಲಿ ಸಾಧ್ಯತೆ ಮತ್ತು ಸವಾಲುಗಳು ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕಿ ತಾರ ಕರುಣ್ ಪ್ರಸ್ತಾವನೆಗೈದರು. ದ್ವಿತೀಯ ಎಂಸಿಜೆ ವಿದ್ಯಾರ್ಥಿನಿ ಜಯಶ್ರೀ ಆರ್ಯಾಪು ಸ್ವಾಗತಿಸಿ, ದೀಕ್ಷಿತಾ ಜೇಡರಕೊಡಿ ವಂದಿಸಿದರು. ಪ್ರಥಮ ಎಂಸಿಜೆ ವಿದ್ಯಾರ್ಥಿನಿ ದಿವ್ಯಶ್ರೀ ವಜ್ರದುಂಬಿ ಕಾರ್ಯಕ್ರಮ ನಿರೂಪಿಸಿದರು.