’ಜನ ಇಂದು ತಿಳಿದಿರುವ ಮಾಹಿತಿಯನ್ನೇ ನಾಳೆ ಪತ್ರಿಕೆಯಲ್ಲಿ ಕೊಡಬೇಕೇ?’ – ವೆಬ್ಸೈಟ್ ಕಾರ್ಯಾಗಾರವನ್ನು ಉದ್ಘಾಟಿಸಿ ಗೋಪಾಲಕೃಷ್ಣ ಕುಂಟಿನಿ ಪ್ರಶ್ನೆ
ಪುತ್ತೂರು: ಪತ್ರಿಕೋದ್ಯಮದಲ್ಲಿ ಪರಿವರ್ತನೆಯ ಕಾಲಘಟ್ಟ ಆರಂಭವಾಗಿದೆ. ನಾಗರಿಕ ಪತ್ರಿಕೋದ್ಯಮ ಸದೃಢವಾಗಿ ಬೆಳೆದಿದೆ. ಟ್ವಿಟ್ಟರ್, ವಾಟ್ಸ್‌ಅಪ್‌ಗಳಲ್ಲಿ ಘಟನೆ ನಡೆದು ಸೆಕುಂಡುಗಳಲ್ಲಿ ಮಾಹಿತಿ ರವಾನೆಯಾಗುತ್ತಿದೆ. ಇಂತಹ ಆಧುನಿಕ ವ್ಯವಸ್ಥೆಯಲ್ಲಿ ಪತ್ರಕರ್ತರ ಪಾತ್ರವೇನು ಎಂಬುದನ್ನು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು. ಜನ ಇಂದೇ ತಿಳಿದಿರುವ ಮಾಹಿತಿಯನ್ನು ಪುನಃ ಪತ್ರಿಕೆಯಲ್ಲಿ ನಾಳೆ ಕೊಡಬೇಕೇ? ಅಥವ ಬೇರೆಯೇ ಸಾಧ್ಯತೆಯತ್ತ ಹೊರಳಬೇಕೇ ಎಂಬುದು ಪತ್ರಕರ್ತರ ಬಹು ದೊಡ್ಡ ತುಮುಲ ಎಂದು ಪುತ್ತೂರಿನ ವಿಶ್ವವಾಣಿ ಪತ್ರಿಕೆಯ ಹಿರಿಯ ವರದಿಗಾರ ಗೋಪಾಲಕೃಷ್ಣ ಕುಂಟಿನಿ ಹೇಳಿದರು.
ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗ ದಶಮಾನೋತ್ಸವ ಆಚರಣೆಯ ಪ್ರಯುಕ್ತ ಬೆಂಗಳೂರಿನ ಸಾರಂಗ ಇನ್ಫೋಟೆಕ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ ವೆಬ್‌ಸೈಟ್ ಬರವಣಿಗೆಯ ಬಗೆಗಿನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವೆಬ್ ಬರವಣಿಗೆ ಇಂದು ವ್ಯಾಪಕವಾಗುತ್ತಿದೆ. ಪಾರಂಪರಿಕ ಪತ್ರಿಕೋದ್ಯಮ ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಉಳಿವಿನ ಪ್ರಶ್ನೆಯೂ ಕಾಡದಿರದು. ಪತ್ರಕರ್ತ ಕ್ರಿಯಾಶೀಲನಾಗಿದ್ದರೆ ಮತ್ತು ನಿಜ ಆಸಕ್ತಿಯಿಂದ ಕ್ಷೇತ್ರಕ್ಕೆ ಅಡಿಯಿಟ್ಟಿದ್ದರೆ ಮಾತ್ರ ವೇಗ ಪಡೆದುಕೊಂಡಿರುವ ಪತ್ರಿಕಾ ಕ್ಷೇತ್ರದಲ್ಲಿ ಮುಂದುವರೆಯಲು ಸಾಧ್ಯ. ಪಾರಂಪರಿಕ ಶೈಲಿಗೇ ಅಂಟಿಕೊಳ್ಳದೆ ಹೊಸ ಹೊಸ ಸಾಧ್ಯತೆಗಳನ್ನು ಮೊಗೆಯುತ್ತಿರಬೇಕು. ಆಗ ಜನರಿಂದ ಸ್ವೀಕಾರಗೊಳ್ಳುವುದಕ್ಕೆ ಸಾಧ್ಯ ಎಂದರು.
ಇಂದು ಯುವ ಸಮೂಹ ಅದರಲ್ಲೂ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್ ಫೋನ್‌ಗಳಿವೆ. ಆದರೆ ಅನಗತ್ಯ ವಿಚಾರಗಳನ್ನು ಪಸರಿಸುವುದಕ್ಕೆ ಆ ತಂತ್ರಜ್ಞಾನವನ್ನು ಬಳಸುವುದರ ಬದಲಾಗಿ ರಚನಾತ್ಮಕ ಕಾರ್ಯಗಳಿಗೆ ಉಪಯೋಗಿಸುವಂತಾಗಬೇಕು. ಹೊಸ ಸಂಗತಿಗಳನ್ನು ಅರಿಯುವುದಕ್ಕೆ ಪೂರಕವಾಗಬೇಕು. ಆಗ ಪತ್ರಕರ್ತರಾಗಿ ಉತ್ತಮ ಸಾಧನೆ ಮಾಡುವುದಕ್ಕೆ ಸಾಧ್ಯ. ತಾನು ಅತ್ಯುತ್ತಮ ಪತ್ರಕರ್ತನಾಗಿಯೇ ಗುರುತಿಸಿಕೊಳ್ಳಬೇಕೆಂಬ ಹಠ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಮೂಡಿಬಂದಾಗ ಪತ್ರಿಕೋದ್ಯಮಕ್ಕೆ ಒಳ್ಳೆಯ ಪತ್ರಕರ್ತರ ಆಗಮನವಾಗುತ್ತದೆ ಎಂದು ನುಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಬರವಣಿಗೆ ಅತ್ಯುತ್ತಮ ಕ್ಷೇತ್ರ. ವಿದ್ಯಾರ್ಥಿಗಳು ಈ ಕ್ಷೇತ್ರವನ್ನು ಉಪಯೋಗಿಸಿಕೊಂಡು ಬೆಳೆಯಬೇಕು.ಆಧುನಿಕ ಪ್ರಪಂಚ ಬಯಸುವಂತಹ ವೆಬ್ ಸೈಟ್ ಬರವಣಿಗೆ ಪತ್ರಿಕೋದ್ಯಮಕ್ಕೆ ಹೊಸ ದೃಷ್ಟಿಕೋನವನ್ನು ನೀಡಿದೆ. ಹಾಗಾಗಿ ಆ ಕ್ಷೇತ್ರದಲ್ಲಿ ಬರೆಯುವ, ಬೆಳೆಯುವ ಸಾಧ್ಯತೆಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಬಿ.ಎಡ್.ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಎ.ವಿ.ನಾರಾಯಣ ಮಾತನಾಡಿ ಪ್ರತಿಯೊಬ್ಬರೂ ಹೊಸತನಕ್ಕೆ ಹೊಂದಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಇದ್ದ ವಿಚಾರಧಾರೆಗಳಿಗೇ ಅಂಟಿಕೊಡಿದ್ದರೆ ಬೆಳೆಯುವುದಕ್ಕೆ ಸಾಧ್ಯವಿಲ್ಲ. ವೆಬ್ ಸೈಟ್‌ನಲ್ಲಿ ಇಂದು ಅಪಾರ ಅವಕಾಶಗಳಿವೆ. ಅನೇಕ ಮಂದಿ ಬರಹಗಾರರು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಅಡ್ಡೂರು ಕೃಷ್ಣ ರಾವ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರಥಮಾ ಉಪಾರ್ಧಯಾಯ ಪ್ರಾರ್ಥಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ಥಾವನೆಗೈದು, ಸ್ವಾಗತಿಸಿದರು. ಉಪನ್ಯಾಸಕಿ ಭವ್ಯ ಆರ್ ನಿಡ್ಪಳ್ಳಿ ವಂದಿಸಿದರು. ವಿದ್ಯಾರ್ಥಿನಿ ಪಾತಿಮತ್ ನಿಶ್ಮ ಕಾರ್ಯಕ್ರಮ ನಿರ್ವಹಿಸಿದರು.