ನಾಟಕ ಮತ್ತು ರಂಗಭೂಮಿ ಒಂದು ಪ್ರಭಾವಿ ಕಲಾಮಾಧ್ಯಮ: ಡಾ. ಕೆ.ಎಂ. ಕೃಷ್ಣ ಭಟ್
ಪುತ್ತೂರು ಮಾ.5: ನಾಟಕ ಮತ್ತು ರಂಗಭೂಮಿ ಒಂದು ಪ್ರಭಾವಿ ಕಲಾ ಮಾಧ್ಯಮ. ಸ್ಥಳೀಯ ವಿಚಾರಗಳನ್ನು ರಂಗಭೂಮಿಗೆ ತರುವ ಶಕ್ತಿ ಈ ನಾಟಕಗಳಿಗಿವೆ. ಇಂದಿನ ದಿನಗಳಲ್ಲಿ ಕಲಾಭಿಮಾನಿಗಳಿಗಿಂತ ಕಲಾವಿದ ಅಭಿಮಾನಗಳ ಸಂಘಗಳು ಹೆಚ್ಚಾಗುತ್ತಾ ಇದೆ. ಎಲ್ಲೋ ಒಂದು ಕಡೆ ಈ ಕಾರಣಕ್ಕೆ ಕಲೆ ಬಡವಾಗುತ್ತಾ ಇದೆ. ಬದಲಾದ ಕಾಲಘಟ್ಟದಲ್ಲಿ ಕಲಾವಿದರ ನಡುವಿನ ಸಂಬAಧಗಳೂ ಸಡಿಲವಾಗುತ್ತಿದೆ. ಒಬ್ಬ ಕಲಾವಿದನಲ್ಲೇ ಕಾಣಬಹುದಾಗಿದ್ದ ವೈವಿದ್ಯಮಯ ಕೌಶಲ್ಯಗಳು ಇಂದು ಕಾಣಸಿಗುವುದು ಕಡಿಮೆ ಎಂದು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಗಳ ಆಶ್ರಯದಲ್ಲಿ ಜಿಲ್ಲಾ ಪತ್ರಕರ್ತರು ಹಾಗೂ ಪತ್ರಕೋದ್ಯಮ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಒಂದು ದಿನದ ‘ರಂಗ ವಿಮರ್ಶಾ ಕಮ್ಮಟ’ಕ್ಕೆ ಚಾಲನೆ ನೀಡಿ ಶುಕ್ರವಾರ ಅವರು ಮಾತನಾಡಿದರು.
ನಮ್ಮ ಮೂಗಿನ ನೇರಕ್ಕೇ ವಿಮರ್ಶೆ ಮಾಡದೇ, ಸಾಹಿತ್ಯ ಅಥವಾ ಕಲೆಯ ಒಳ ತಿರುಳನ್ನು ಅರ್ಥ ಮಾಡಿಕೊಂದು ನಿರ್ಲಿಪ್ತತೆಯಿಂದ ವಿಮರ್ಶೆ ಮಾಡಬೇಕು. ಪ್ರೇಕ್ಷಕರ ಅಭಿಪ್ರಾಯಗಳಿಗೆ ವಿಮರ್ಶೆಗಳು ಧ್ವನಿಯಾಗಬೇಕು. ಅದನ್ನು ಬಿಟ್ಟು ವಿಮರ್ಶೆ ಎಂದರೆ ಕಲೆಯನ್ನು, ಕಲಾವಿದರನ್ನು ಅಥವಾ ಸಾಹಿತಿಯನ್ನು ತುಳಿಯುವ ಕೆಲಸ ಮಾಡಬಾರದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಮಾತನಾಡಿ, ಅಗಾಧವಾದ ಇತಿಹಾಸ ರಂಗಕಲೆಗಿದೆ. ಎಂಬತ್ತರ ದಶಕದಲ್ಲಿ ರಂಗ ವಿಮರ್ಶೆಯನ್ನು ಮಾಡುವವರು ಅಧಿಕವಿದ್ದರು ಆದರೆ ಪತ್ರಿಕೆಗಳಲ್ಲಿ ಅವಕಾಶಗಳು ಕಡಿಮೆ ಇದ್ದವು. ಆದರೆ ಇಂದು ಅನೇಕ ಪತ್ರಿಕೆಗಳು ಅವಕಾಶವನ್ನು ನೀಡುತ್ತಿವೆ. ಆದರೆ ರಂಗ ವಿಮರ್ಶಕರ ಸಂಖ್ಯೆ ಕಡಿಮೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ. ಭೀಮಸೇನ ಆರ್. ಮಾತನಾಡಿ, ಕಾರ್ಯಕ್ರಮಗಳ ಜೊತೆಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಾಗ ಅನೇಕ ಬಾರಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ ಎಂದು ಮಾತ್ರ ಉಲ್ಲೇಖಿಸುಲಾಗುತ್ತದೆ, ಆದರೆ ತಿಂಗಳುಗಳ ಕಾಲ ಆ ಕಲಾವಿದರು ನಡೆಸಿದ ತಯಾರಿಗೆ ಯಾವ ಪತ್ರಿಕೆಗಳಲ್ಲೂ ಪ್ರಕಟವಾಗುವುದೇ ಇಲ್ಲ! ಅದೇ ಆ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತಾಗಿ ಒಂದು ವಿಮರ್ಶೆ ಅಥವಾ ಲೇಖನವು ಪ್ರಕಟವಾದಾಗ ಅದು ಆ ಕಲಾವಿದರಿಗೆ ನಾವು ಕೊಡಬಹುದಾದ ಅತಿದೊಡ್ಡ ಬಹುಮಾನವಾಗಿರುತ್ತದೆ. ಅಕಾಡೆಮಿಯಿಂದ ಸಾಕಷ್ಟು ಸೌಲಭ್ಯಗಳು ಇವೆ. ಅವುಗಳು ಬಹುತೇಕ ಮಂದಿಗೆ ತಿಳಿದೇ ಇಲ್ಲ. ಅವುಗಳ ಬಗ್ಗೆ ತಿಳಿದುಕೊಂಡು, ಉಪಯೋಗ ಪಡೆದುಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ನುಡಿದರು.
ಈ ಸಂದರ್ಭ ವೇದಿಕೆಯಲ್ಲಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ಪಿ. ಬಿ. ಹರೀಶ್ ಮಾತನಾಡಿ ಶುಭಹಾರೈಸಿದರು.
ಕಾಲೇಜಿನ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಶುಭ್ರ ಪುತ್ರಕಳ ಪ್ರಾರ್ಥಿಸಿದರು. ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಎಂ. ಕೆ. ಮಠ ವಂದಿಸಿದರು. ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿನಿ ಅರ್ಪಿತ ಕಾರ್ಯಕ್ರಮ ನಿರೂಪಿಸಿದರು.