ಪರಿಶ್ರಮದಿಂದ ಮಾತ್ರ ಪರ್ತಕರ್ತರಾಗುವುದಕ್ಕೆ ಸಾಧ್ಯ : ಡಾ.ಎಚ್.ಜಿ.ಶ್ರೀಧರ
ಪುತ್ತೂರು: ಪದವಿ ಹಂತದಲ್ಲಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿರುವವರಿಗೆ ಅತ್ಯುತ್ತಮ ಅವಕಾಶಗಳಿವೆ. ಆದರೆ ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಅತೀವ ಪರಿಶ್ರಮವೂ ಅಗತ್ಯ ಎಂಬುದನ್ನು ಗಮನಿಸಬೇಕು. ಕೇವಲ ಪತ್ರಿಕೋದ್ಯಮ ವಿಷಯವನ್ನು ಅಧ್ಯಯನ ನಡೆಸಿದ ಮಾತ್ರಕ್ಕೆ ಉದ್ಯೋಗಾವಕಾಶ ಪ್ರಾಪ್ತಿಸುವುದಿಲ್ಲ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ. ಹೇಳಿದರು.
ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.
ಪತ್ರಕರ್ತನಾಗುವವನಿಗೆ ವಿನಯವಂತಿಗೆ ಇರಬೇಕು. ಪ್ರತಿಯೊಂದು ವಿಷಯವನ್ನೂ ತಿಳಿದುಕೊಳ್ಳಬೇಕು ಎಂಬ ಹಂಬಲ ಇರಬೇಕು. ಭಾಷಾ ಶುದ್ಧತೆಯಂತೂ ಅನಿವಾರ್ಯ. ಸಮಯದ ಹಂಗಿಲ್ಲದೆ ದುಡಿಯಬಲ್ಲೆ ಅನ್ನುವವರಿಗೆ ಮಾತ್ರ ಈ ಕ್ಷೇತ್ರ ಸುಂದರ ಅನ್ನಿಸಿಕೊಳ್ಳಬಹುದು. ಮೂರು ವರ್ಷದ ಪದವಿ ಹಂತದಲ್ಲಿ ಈ ಎಲ್ಲಾ ಗುಣಗಳನ್ನು ರೂಢಿಸಿಕೊಳ್ಳಲು ಸಾಧ್ಯವಾದರೆ ಮಾತ್ರ ಪರ್ತಕರ್ತರಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯ ಎಂದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಈ ಹಿಂದೆ ಓದುತ್ತಿದ್ದ ವಿದ್ಯಾರ್ಥಿಗಳು ವಿಭಾಗದಲ್ಲಿನ ಮೀಡಿಯಾ ಸೆಂಟರ್ ಅನ್ನು ಪತ್ರಿಕಾ ಕಛೇರಿಯಂತೆಯೇ ರೂಪಿಸಿದ ಉದಾಹರಣೆಗಳಿವೆ. ರಾತ್ರಿಯಿಡೀ ವಿಭಾಗದ ಪ್ರಾಯೋಗಿಕ ಪತ್ರಿಕೆಯಾದ ವಿಕಸನವನ್ನು ತಯರಿಸುತ್ತಾ, ಅಲ್ಲೇ ರಾತ್ರಿ ಕಳೆದು ಬೆಳಗ್ಗೆ ಪತ್ರಿಕೆಯನ್ನು ಹೊರತಂದಂತಹ ವಿದ್ಯಾರ್ಥಿಗಳ ಬಗೆಗೆ ಯೋಚಿಸುವಾಗ ರೋಮಾಂಚನವಾಗುತ್ತದೆ. ಅಂತಹ ವಿದ್ಯಾರ್ಥಿಗಳೆಲ್ಲಾ ಇಂದು ಅತ್ಯುತ್ತಮ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂಬುದನ್ನು ಗಮನಿಸಬೇಕು ಎಂದರು.
ಪರಿಣಾಮಕಾರಿ ಸಂವಹನ ಪರ್ತಕರ್ತನಿಗಿರಬೇಕಾದ ವಿಶೇಷ ಅರ್ಹತೆ. ಈ ಹಿನ್ನಲೆಯಲ್ಲಿ ನಿರಂತರ ಬರವಣಿಗೆ ಹಾಗೂ ಮೌಖಿಕ ಸಂವಹನ ಅಗತ್ಯ. ವಿಭಾಗ ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯಂತಹ ವಿಶಿಷ್ಟ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಪತ್ರಿಕೋದ್ಯಮ ಕಲಿಕೆ ಕೇವಲ ತರಗತಿಗೆ ಮೀಸಲಲ್ಲ. ಪತ್ರಿಕೋದ್ಯಮದ ಬಹುತೇಕ ಪಟ್ಟುಗಳನ್ನು ತರಗತಿಯಾಚೆಗೇ ಕಲಿಯುವುದಕ್ಕಿದೆ. ಹಾಗಾಗಿ ಯಾರದೋ ತೋಟದಲ್ಲಿ, ಅಂಗಳದಲ್ಲಿ, ಕಾಲೇಜ್ ಕಾರಿಡಾರಿನಲ್ಲೂ ಪತ್ರಿಕೋದ್ಯಮ ತರಗತಿಗಳು ನಡೆಯುತ್ತವೆ. ಈ ಹಿಂದೆಯೂ ಇಂತಹ ಅನೇಕ ತೆರನಾದ ಪ್ರಾಯೋಗಿಕ ತರಗತಿಗಳು ವಿಭಾಗದಲ್ಲಿ ಜಾರಿಗೆ ಬಂದಿವೆ ಎಂದರು.
ಕನ್ನಡ ಪ್ರಾಧ್ಯಾಪಕ ಡಾ.ಮನಮೋಹನ ಎಂ, ಇಂಗ್ಲಿಷ್ ಉಪನ್ಯಾಸಕಿ ಸರಸ್ವತಿ ಸಿ.ಕೆ ಹಾಗೂ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ವಿನುತ ಎಂ.ಎಸ್ ಉಪಸ್ಥಿತರಿದ್ದರು. ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರಥಮಾ ಪ್ರಾರ್ಥಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಭವ್ಯ ಪಿ.ಆರ್ ವಂದಿಸಿದರು.