ಪ್ರತಿ ಘಟನೆಯೂ ಒಂದೊಂದು ಪಾಠ : ಹರೀಶ್ ಶಾಸ್ತ್ರಿ
ಪುತ್ತೂರು: ನಮ್ಮ ಪರಿಸರವೇ ನಮಗೆ ನಿಜವಾದ ಗುರು. ಪರಿಸರದಲ್ಲಿನ ಪ್ರತಿಯೊಂದು ಘಟನೆಯೂ ನಮ್ಮ ಕಲಿಕೆಗೆ ಪೂರಕ. ಅದಕ್ಕಾಗಿ ಸಿಗುವ ಪ್ರತಿಯೊಂದು ಅವಕಾಶವನ್ನೂ ಸದುಪಯೋಗ ಪಡಿಸಿಕೊಳ್ಳಬೇಕು. ಸೋಲೇ ಗೆಲುವಿನ ಸೋಪಾನ. ಸ್ಪರ್ಧೆಗಳು ಅವಕಾಶವನ್ನು ಕೊಡುತ್ತದೆ. ಅವಕಾಶ ಅನುಭವವನ್ನು ಕೊಡುತ್ತದೆ ಎಂದು ಹರೀಶ್ ಶಾಸ್ತ್ರಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಅಂತಿಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಆಯೋಜಿಸುವ ವಿಜ್ಞಾನ ಹಬ್ಬ eureka 2018 ವಿಜ್ಞಾನ ಸ್ವರ’ದ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದು ವಿಶೇಷವಾದ ಪ್ರತಿಭೆಯಿರುತ್ತದೆ. ಅಂತಹ ಪ್ರತಿಭೆಗಳ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಯನ್ನು ಒದಗಿಸುತ್ತವೆ. ನಾವು ನಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಸ್ಪರ್ಧಿಸ ಬೇಕು. ಅದು ಇತರರಿಗೆ ಹಾನಿಯುಂಟು ಮಾಡಬಾರದು ಎಂದು ನುಡಿದರು.
ವಿದ್ಯಾರ್ಥಿನಿ ಅಕ್ಷತಾ ಹಾಗೂ ಅನನ್ಯಲಕ್ಷ್ಮೀ ಪ್ರಾರ್ಥಿಸಿದರು. ಸುಕನ್ಯಾ ಸ್ವಾಗತಿಸಿ, ಉಪನ್ಯಾಸಕ ಪ್ರೊ. ಶಿವಪ್ರಸಾದ್ ಪ್ರಸ್ತಾವನೆ ಗೈದರು. ವಿದ್ಯಾರ್ಥಿ ಪ್ರಜ್ವಲ್ ವಂದಿಸಿದರು. ಶ್ರೀಮಾ ಹಾಗೂ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.