ಬಾಯಿಯ ಆರೋಗ್ಯ ಅಗತ್ಯ : ಡಾ| ವೀಣಾ ಕೆ.ಎಂ.
ಪುತ್ತೂರು: ತಂದೆ ತಾಯಿಯ ಆಹಾರ ಪದ್ದತಿ ಮಗುವಿನ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಗರ್ಭಿಣಿ ತಾಯಿಯ ಆಹಾರ ಕ್ರಮ ಮತ್ತು ಆಕೆ ಸೇವಿಸುವ ಮಿಟಮಿನ್ ಮಾತ್ರೆಗಳೂ ಮಗುವಿನ ಬಾಯಿಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಅದಕ್ಕಾಗಿ ಗರ್ಭಿಣಿಯರು ವಿಟಮಿನ್ ಮಾತ್ರೆಯ ಬದಲಾಗಿ ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ ಎಂದು ಮಂಗಳೂರಿನ ಎನಪೋಯ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕಿ ಡಾ| ವೀಣಾ ಕೆ.ಎಮ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ, ರೋವರ್ಸ್ ಆಂಡ್ ರೆಂಜರ್ಸ್ ಮತ್ತು ಯೂತ್ ರೆಡ್ ಕ್ರಾಸ್ ಯುನಿಟ್ನ ಸಂಯುಕ್ತ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಓರಲ್ ಹೆಲ್ತ್ ಟು ಓವರಾಲ್ ಹೆಲ್ತ್ ಎಂಬ ವಿಷಯದ ಕುರಿತಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ದೇಹದ ಆರೋಗ್ಯಕ್ಕೆ ಸಂಬಂಧಿಸಿದ ಮುಖ್ಯ ಅಂಗವಾಗಿರುವ ನಾಲಗೆ ಸಾಮಾಜಿಕ ಆರೋಗ್ಯಕ್ಕೂ ಮುಖ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿದರೆ ಯಾವ ರೋಗವು ಬರುವುದಿಲ್ಲ. ಅದರಂತೆ ಸಮಯಕ್ಕೆ ಸರಿಯಾದ ಮಾತು ಸಾಮಾಜಿಕ ಸ್ವಸ್ಥ್ಯಕ್ಕೂ ಅತೀ ಅಗತ್ಯ ಎಂದು ಕಿವಿ ಮಾತು ನುಡಿದರು.
ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥ ಕೆ.ಎಸ್. ಈಶ್ವರ ಪ್ರಸಾದ್ ಸ್ವಾಗತಿಸಿ, ಸುಹಾಸ್ ಕೃಷ್ಣ ಎಂ.ಜಿ. ಪರಿಚಯ ಭಾಷಣ ಮಾಡಿದರು. ಉಪನ್ಯಾಸಕಿ ದಿವ್ಯಶ್ರೀ ಜಿ. ವಂದಿಸಿ, ವಿದ್ಯಾರ್ಥಿಗಳಾದ ಅಭಿಷೇಕ್ ಹಾಗೂ ದಿವ್ಯ ನಿರ್ವಹಿಸಿದರು.