ಭಗವದ್ಗೀತೆಯು ಶಾಸ್ತ್ರ ಉಪನಿಷತ್ತುಗಳ ಸಾರ : ವಿದ್ವಾನ್ ರಮೇಶ ಜೋಯಿಸ
ಪುತ್ತೂರು: ಮನುಷ್ಯನಿಗೆ ಸಂಸ್ಕಾರ ದೊರೆತಾಗ ಮಾತ್ರ ಅವನು ಪರಿಪೂರ್ಣ ಮಾನವನಾಗುತ್ತಾನೆ. ಭಗವದ್ಗೀತೆಯ ಅಧ್ಯಯನದಿಂದ ಸಂಸ್ಕಾರ ದೊರೆಯುತ್ತದೆ. ಜೀವನದ ನಿಯಮಗಳನ್ನು ತಿಳಿಯಲು ಸಂಸ್ಕಾರ ಅಗತ್ಯ. ಮಾತ್ರವಲ್ಲದೇ ಇದರಿಂದ ಧರ್ಮಾಚರಣೆಯು ಸಾಧ್ಯ. ಧರ್ಮದಿಂದ ಜೀವನ ಸಾರ್ಥಕವಾಗುತ್ತದೆ. ಇವೆಲ್ಲವುಗಳಿಗೆ ಭಗವದ್ಗೀತೆಯ ಪಠಣ ಅವಶ್ಯಕ. ಯುವಜನರು ಭಗವದ್ಗೀತೆಯ ಅಧ್ಯಯನ ಮಾಡಬೇಕು ಎಂದು ಪಣಂಬೂರಿನ ಎನ್.ಎಂ.ಪಿ.ಟಿ. ಹೈಸ್ಕೂಲ್‌ನ ಸಂಸ್ಕೃತ ಅಧ್ಯಾಪಕ ವಿದ್ವಾನ್ ರಮೇಶ ಜೋಯಿಸ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮತ್ತು ವಿಕಾಸಂ ಸಂಸ್ಕೃತ ಸಂಘದ ಐಕ್ಯುಎಸಿ ಆಶ್ರಯದಲ್ಲಿ ನಡೆದ ಶ್ರೀಮದ್ ಭಗವದ್ಗೀತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಜನರು ಕಷ್ಟಗಳನ್ನು ಎದುರಿಸಿ ಜೀವನ ಮಾಡುವುದನ್ನು ಕಲಿಯುವ ಅಗತ್ಯವಿದೆ. ಅಲ್ಲದೇ ಜೀವನದ ಕಠಿಣತೆಗೆ ಕುಗ್ಗುವ ಬದಲಾಗಿ ಅದನ್ನು ದಿಟ್ಟತನದಿಂದ ಎದುರಿಸಿ ಮುಂದುವರಿಯುವ ಕಲೆಯನ್ನು ತಿಳಿಯುವ ಅವಶ್ಯಕತೆಯಿದೆ. ಭಗವದ್ಗೀತೆಯ ಪಠಣದಿಂದ ಮಾನಸಿಕವಾಗಿ ಸದೃಢವಾಗಲು ಸಾಧ್ಯ. ಮಾತ್ರವಲ್ಲದೇ ಇದು ಇಂದಿನ ಯುವ ಜನರಿಗೆ ಸಂಬಂಧಿಸಿದಂತಹ ಜೀವನ ಮಾರ್ಗವನ್ನು ಸೂಚಿಸುವ ಗೀತೆಯಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್‍ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಮನುಷ್ಯನು ಸಂಸ್ಕಾರವನ್ನು ಪಡೆಯಲು ಭಗವದ್ಗೀತೆಯ ಪಠಣ ಅವಶ್ಯಕ. ಭಗವದ್ಗೀತೆಯ ಅಧ್ಯಯನದಿಂದ ದರ್ಮದ ಅರಿವು ದೊರೆಯುತ್ತದೆ. ಮನುಷ್ಯನು ಧರ್ಮವನ್ನನುಸರಿಸಿ ಜೀವನ ನಡೆಸಬೇಕು. ಅಲ್ಲದೇ ಮನುಷ್ಯನಿಗೆ ನೇಮಿಸಿದಂತಹ ಕೆಲಸಗಳನ್ನು ಧರ್ಮದ ಮುಖಾಂತರ ನಿರ್ವಹಿಸಬೇಕು ಎಂದು ತಿಳಿಸಿದರು.
ವಿಕಾಸಂನ ಸಂಯೋಜಕ ಡಾ.ಶ್ರೀಶಕುಮಾರ.ಯಂ.ಕೆ ಪ್ರಸ್ತಾವಿಸಿದರು. ವಿಕಾಸಂನ ಅಧ್ಯಕ್ಷ ಜ್ಯೇಷ್ಠರಾಜ ಸ್ವಾಗತಿಸಿ, ಕಾರ್ಯದರ್ಶಿ ಅನನ್ಯಲಕ್ಷ್ಮೀ ವಂದಿಸಿದರು, ವಿದ್ಯಾರ್ಥಿ ನಿಖೇತ್ ನಿರ್ವಹಿಸಿದರು. ವಿದ್ಯಾರ್ಥಿನಿ ಪದ್ಮಶ್ರೀ ಪ್ರಾರ್ಥಿಸಿದರು.