’ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗಕ್ಕೆ ಅಧಿಕ ಜವಾಬ್ಧಾರಿ’
ಪುತ್ತೂರು: ಇಂದು ಜಾಗತೀಕರಣದ ಪರಿಣಾಮದಿಂದಾಗಿ ಇಡೀ ವಿಶ್ವವೇ ಔದ್ಯೋಗಿಕ ಕ್ಷೇತ್ರದ ಮೂಲವಾಗಿ ಪರಿಣಮಿಸಿದ್ದು, ಯಾವುದೇ ಸಂಸ್ಥೆಗಳಲ್ಲಿ ವಿವಿಧ ದೇಶದ ಮಂದಿ ಅವಕಾಶ ಪಡೆಯುವುದಕ್ಕೆ ಸಾಧ್ಯವಾಗುತ್ತಿದೆ. ಹೀಗೆ ನಾನಾ ರಾಷ್ಟ್ರಗಳಿಂದ, ನಾನಾ ಸಂಸ್ಕೃತಿಗಳಿಂದ ಬಂದ ಮಂದಿಯನ್ನು ಒಂದೇ ಸೂರಿನಡಿ, ಒಂದೇ ತೆರನಾಗಿ ಮುನ್ನಡೆಸಿಕೊಂಡು ಹೋಗುವುದು ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಜವಾಬ್ಧಾರಿಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಪ್ರಾಧ್ಯಾಪಕ ಪ್ರೊ.ಯತೀಶ್ ಕುಮಾರ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ಶಾಸ್ತ್ರ ಹಾಗೂ ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಮರ್ಜಿಂಗ್ ಟ್ರೆಂಡ್ಸ್ ಇನ್ ಎಚ್.ಆರ್.ಎಂ ಎಂಬ ವಿಷಯದ ಬಗೆಗೆ ಮಾತನಾಡಿದರು.
ಮಾನವ ಸಂಪನ್ಮೂಲ ವಿಭಾಗವು ಸಂಸ್ಥೆಯ ವಿವಿಧ ವಿಷಯಗಳ ಬಗೆಗೆ ತೀರ್ಮಾನ ಕೈಗೊಳ್ಳುವಾಗ ಉದ್ಯೋಗಿಗಳನ್ನೂ ಒಳಗೊಂಡು ಕಾರ್ಯನಿರ್ವಹಿಸಬೇಕು. ಆಗ ನಿರ್ವಹಣೆ ಸುಲಭ ಸಾಧ್ಯವಾಗುತ್ತದೆ. ಅಲ್ಲದೆ ಉದ್ಯೋಗಿಗಳ ಬಗೆಗೆ ಅತ್ಯಂತ ಹೆಚ್ಚು ಕಾಳಜಿಯನ್ನು ಹೊಂದಿರಬೇಕು. ಪ್ರತಿಯೊಬ್ಬನ ಬಗೆಗೂ ಕ್ಷೇಮಾಭಿವೃದ್ಧಿಯ ಯೋಚನೆ ಹೊಂದಿರಬೇಕು. ಆಗ ಮಾತ್ರ ಸಂಸ್ಥೆ ಸುಸ್ಥಿರವಾಗಿ ಸಾಗಲು ಸಾಧ್ಯ ಎಂದು ನುಡಿದರು.
ಯಾಔಉದೇ ಸಂಸ್ಥೆಯಲ್ಲಿ ಅಭಿಪ್ರಾಯ ಸಂಗ್ರಹ ವ್ಯವಸ್ಥೆ ಇರುವುದು ಒಳ್ಳೆಯದು. ಕಾಲಕಾಲಕ್ಕೆ ಉದ್ಯೋಗಿಗಳ ಅಭಿಪ್ರಾಯವನ್ನು ಕೇಳುವುದರಿಂದ ಸಂಸ್ಥೆಯ ಬೆಳವಣಿಗೆಗೆ ಸಹಾಯವಾಗುತ್ತದೆ. ಆಧುನಿಕ ದಿನಗಳ ತಾಂತ್ರಿಕ ಬೆಳವಣಿಗೆಯಿಂದಾಗಿ ಕಡಿಮೆ ಜನರು ಹಾಗೂ ಅಧಿಕ ಕೆಲಸ ಸಾಧ್ಯವಾಗುತ್ತಿದೆ. ಹೀಗಿರುವಾಗ ನಿರ್ವಹಣೆ ಸುಲಭವೆನಿಸುತ್ತಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ವಹಿಸಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗ ಹಾಗೂ ವ್ಯವಹಾರ ನಿರ್ವಹಣಾ ವಿಭಾಗಗಳ ಮುಖ್ಯಸ್ಥರುಗಳಾದ ಪ್ರೊ.ಆನಂದ ಹಾಗೂ ಪ್ರೊ.ವೆಂಕಟರಮಣ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಅನೂಷಾ ಸ್ವಾಗತಿಸಿ, ಸೌಜನ್ಯ ವಂದಿಸಿದರು. ಉಪನ್ಯಾಸಕ ಅತುಲ್ ಶೆಣೈ ಹಾಗೂ ಉಪನ್ಯಾಸಕಿ ಅಂಕಿತ ಕಾರ್ಯಕ್ರಮ ನಿರ್ವಹಿಸಿದರು.