ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟನೆ
ನಮ್ಮ ದೇಶದ ದೊಡ್ಡ ಶಕ್ತಿಯೆಂದರೆ ಯುವಜನತೆ ಹಾಗೂ ಜೈವಿಕ ಸಂಪತ್ತು. ನಾವು ಇವೆರಡನ್ನು ಹೇಗೆ ಒಂದುಗೂಡಿಸಬೇಕು ಎಂಬುದರ ಬಗೆಗೆ ಯೋಚಿಸಬೇಕು ಎಂದು ಪೊನ್ನಂಪೇಟೆಯ ಫಾರೆಸ್ಟರಿ ಕಾಲೇಜಿನ ಪ್ರಾಧ್ಯಾಪಕ ಡಾ. ಕುಶಲಪ್ಪ ಸಿ. ಜಿ ಹೇಳಿದರು.
ಅವರು ಶುಕ್ರವಾರ ವಿವೇಕಾನಂದ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ಶಿಕ್ಷಕರ ಸಂಘ ವನಶ್ರೀಯ ಆಶ್ರಯದಲ್ಲಿ ’ಈಡಿಬಲ್ ಆಂಡ್ ನಾನ್ ಈಡಿಬಲ್ ಮಶ್ರೂಮ್ಸ್ ಆಫ್ ಕರ್ನಾಟಕ’ ಎಂಬ ಒಂದು ದಿನದ ಯು.ಜಿ.ಸಿ. ಪ್ರಾಯೋಜಿತ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸಸ್ಯ ಜಗತ್ತಿನಲ್ಲಿ ಸ್ವಂತ ಆಹಾರ ತಯಾರಿಸಲಾಗದ ಸಸ್ಯವೆಂದರೆ ಅಣಬೆ. ಆದರೆ ಅಣಬೆಗಳಿಲ್ಲದೆ ಜೈವಿಕಕ್ರಿಯೆ ನಡೆಯಲು ಸಾಧ್ಯವಿಲ್ಲ. ಇದು ಜೈವಿಕ ಕ್ರಿಯೆಯನ್ನು ವೃಧ್ದಿಗೊಳಿಸುತ್ತದೆ. ಅಣಬೆಗಳು ಪೌಷ್ಠಿಕಾಂಶ ಭರಿತವಾದ ಉತ್ತಮ ಆಹಾರವಾಗಿದ್ದು ಔಷಧೀಯ ಗುಣಗಳನ್ನು ಹೊಂದಿವೆ. ಅಣಬೆಗಳ ಕೃಷಿ ಮಾಡಬೇಕು. ಇದರಿಂದ ಅನೇಕ ಮಂದಿ ನಿರುದ್ಯೋಗಿಗಳಿಗೆ ಕೆಲಸ ದೊರತಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಪ್ರೊ.ಎ.ವಿ. ನಾರಾಯಣ ಮಾತನಾಡಿ ಅಣಬೆಗಳಿಗೆ ಔಷಧೀಯ ಗುಣಗಳಿವೆ. ಕ್ಯಾನ್ಸರ್‌ನಂತಹ ಖಾಯಿಲೆಯನ್ನು ಅಣಬೆ ವಾಸಿಮಾಡುತ್ತದೆ ಎಂದು ಹೇಳಿದರು.
ಅಡ್ಯನಡ್ಕದ ವಾರಣಾಸಿ ಸಂಶೋಧನಾಲಯದ ನಿರ್ದೇಶಕ ಡಾ. ವಾರಣಾಸಿ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ಅನುಭವ ಹಂಚಿಕೊಂಡರು. ಬೆಂಗಳೂರಿನ ಸೈಂಟ್ ಜೋಸೆಫ್ಸ್ ಸ್ವಾಯತ್ತ ಕಾಲೇಜಿನ ಸಸ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಡಾ. ಕೆ.ಬಿ.ಪುರುಷೋತ್ತಮ್, ಬೆಂಗಳೂರಿನ ಎಂ ಎಸ್ ರಾಮಯ್ಯ ಕಾಲೇಜಿನ ಮೈಕ್ರೋಬಯೋಲಜಿ ವಿಭಾಗದ ಮುಖ್ಯಸ್ಥೆ ಡಾ. ಪುಷ್ಪಾ ಎಚ್, ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ ಭಟ್ ಸ್ವಾಗತಿಸಿದರು. ಪ್ರಾಧ್ಯಾಪಕ ದೇವಿಪ್ರಸಾದ್ ವಂದಿಸಿದರು. ಸುಕ್ಷ, ಸುಶ್ಮಿತ, ಮಧುರಾ, ಚೇತನಾ ಆಶಯಗೀತೆ ಹಾಡಿದರು. ಮಿಲನ, ಸುಕ್ಷಿತ, ಬಿಂದುಶ್ರೀ ಕಾರ್ಯಕ್ರಮ ನಿರೂಪಿಸಿದರು.