ವಿಜ್ಞಾನವು ಎಲ್ಲರ ಸೊತ್ತು : ಡಾ. ಬಿ.ಶ್ರೀಧರ ಭಟ್
ಪುತ್ತೂರು: ದೀಪ ಬೆಳಗುವುದು ಅಂಧಕಾರದಿಂದ ಬೆಳಕಿನೆಡೆಗೆ ತೆರಳಲು. ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸುವುದೇ ಬೆಳಕು. ಇದರಲ್ಲಿ ವೈಜ್ಞಾನಿಕತೆಯಿದೆ. ವಿಜ್ಞಾನವನ್ನು ಎಲ್ಲೆಡೆಯೂ ಕಾಣಬಹುದು. ಪ್ರತಿಯೊಂದು ಜೀವಕಣವೂ ವಿಜ್ಞಾನವನ್ನೊಳಗೊಂಡಿದೆ. ನಮ್ಮ ಸಂಸ್ಕೃತಿಯು ವಿಜ್ಞಾನದೊಂದಿಗೆ ಮಿಳಿತವಾಗಿದೆ ಎಂದು ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್‍ಯ ಡಾ.ಬಿ.ಶ್ರೀಧರ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಿಜ್ಞಾನ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ದೈನಂದಿನ ಜೀವನದಲ್ಲಿ ವಿಜ್ಞಾನವನ್ನು ಹೆಚ್ಚು ಬಳಕೆ ಮಾಡುತ್ತೇವೆ. ವಿಜ್ಞಾನದ ಅಧ್ಯಯನದಿಂದ ಪರಿಸರದಲ್ಲಿ ಒಳಗೊಂಡಿರುವ ರಹಸ್ಯಗಳನ್ನು ಅರಿಯಬಹುದು. ವಿಚಿತ್ರಗಳನ್ನು ಅಧ್ಯಯನ ಮಾಡುವಲ್ಲಿ ವಿಜ್ಞಾನ ಮಹತ್ವದ ಪಾತ್ರ ವಹಿಸುತ್ತದೆ. ಆಧುನಿಕ ಸಮಾಜ ವಿಜ್ಞಾನವನ್ನು ಹೆಚ್ಚು ಅವಲಂಬಿಸಿದೆ. ಜೀವನದ ಪ್ರತೀ ಹಂತವೂ ವಿಜ್ಞಾನದ ಆವಿಷ್ಕಾರಗಳನ್ನು ಒಳಗೊಂಡಿದೆ. ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಬೆಳಕು ಪ್ರತಿಯೊಬ್ಬನ ಜೀವನದ ಅವಿಭಾಜ್ಯ ಅಂಗ. ವಿಜ್ಞಾನವನ್ನು ಕಲಿಯುವ ಮೂಲಕ ಸಮಾಜದಲ್ಲಿ ಉತ್ತಮ ಕಾರ್ಯ ನಡೆಸುವಲ್ಲಿ ಸಹಾಯ ಮಡಬೇಕು. ಅದರ ಮೂಲಕ ಸಮಾಜಕ್ಕೆ ಬೆಳಕಾಗಬೇಕು. ವಿಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ನುಡಿದರು.
ವಿಜ್ಞಾನ ಸಂಘದ ಸಂಯೋಜಕ ಶಿವಪ್ರಸಾದ್.ಕೆ.ಎಸ್ ಪ್ರಸ್ತಾವಿಸಿದರು.ವಿಜ್ಞಾನ ಸಂಘದ ಕಾರ್ಯದರ್ಶಿ ದಿವ್ಯಾ ಸುಸುಮ ಸ್ವಾಗತಿಸಿ, ಅಧ್ಯಕ್ಷ ಅನ್ವಿತ್ ವಂದಿಸಿದರು. ವಿದ್ಯಾರ್ಥಿನಿಯರಾದ ರಶ್ಮಿತಾ.ಎಚ್ ಮತ್ತು ಶ್ರೀಶರಣ್ಯ.ಯು.ಆರ್ ಕಾರ್ಯಕ್ರಮ ನಿರ್ವಹಿಸಿದರು.