ವಿವೇಕಾನಂದದಲ್ಲಿ ಏಳು ಸಾವಿರ ಜನರ ಮಧ್ಯೆ ಸ್ವಾತಂತ್ರ್ಯೋತ್ಸವದ ಸಂಭ್ರಮ – ಹೆಣ್ಣುಮಕ್ಕಳು ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಭಾರತದಲ್ಲಿ ಮಾತ್ರ: ಡಾ.ಪ್ರಭಾಕರ ಭಟ್
ಪುತ್ತೂರು : ಇಡೀ ಜಗತ್ತಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೆಣ್ಣುಮಕ್ಕಳು ಹೋರಾಡಿದ ಇತಿಹಾಸವಿರುವುದು ಭಾರತದಲ್ಲಿ ಮಾತ್ರ. ಈ ಮಣ್ಣಿನಲ್ಲಿ ಅಂತಹ ವಿಶಿಷ್ಟ ಶಕ್ತಿ ಅಡಗಿದೆ. ಅನೇಕಾನೇಕ ಮಂದಿಯ ಬಲಿದಾನದಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ಪಡೆದುಕೊಂಡ ಸ್ವಾತಂತ್ರ್ಯ ಯಾವ ರೀತಿಯಲ್ಲಿ ಬಳಕೆಯಾಗುತ್ತಿದೆ ಎಂಬುದು ಚಿಂತನಾರ್ಹ ಸಂಗತಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ನೆಹರು ನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ಸುಮಾರು ಏಳು ಸಾವಿರ ವಿದ್ಯಾಥಿಗಳು, ಉಪನ್ಯಾಸಕ-ಉಪನ್ಯಾಸಕೇತರ ವೃಂದ, ಆಡಳಿತ ಮಂಡಳಿ, ಹೆತ್ತವರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಆಯೋಜಿಸಲಾದ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣಗೈದು ಸೋಮವಾರ ಸಂದೇಶ ನೀಡಿದರು.
ಸ್ವಾತಂತ್ರ್ಯ ಎಂದರೆ ನಮ್ಮದೇ ಚಿಂತನೆ, ನಮ್ಮದೇ ತಂತ್ರಗಾರಿಕೆ ಎಂದರ್ಥ. ಆದರೆ ಈಗ ಯಾವ ಕ್ಷೇತ್ರದಲ್ಲೂ ನಮ್ಮ ತನ ಉಳಿದುಕೊಂಡಿಲ್ಲ. ಹೀಗಿರುವಾಗ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿರಿಯರ ಆಶಯ ಈಡೇರುವುದಾದರೂ ಹೇಗೆ? ನಮ್ಮ ಗುರು-ಶಿಷ್ಯ ಸಂಬಂಧಗಳು ಹೇಗಿವೆ? ಈ ಬಗೆಗೆ ಯೋಚಿಸಿದಾಗ ಆತಂಕವಾಗುತ್ತದೆ. ಇಂದು ನಾವು ರಾಷ್ಟ್ರದ್ರೋಹಿಗಳನ್ನು ಹಾಗೂ ಕಾಮುಕರನ್ನು ಸೃಷ್ಟಿಸುತ್ತಿದ್ದೇವೆಯೋ ಎಂಬ ಚಿಂತೆ ಸಹಜವಾಗಿಯೇ ಕಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ, ನಿರ್ದೇಶಕರುಗಳಾದ ಶಿವಪ್ರಸಾದ್ ಇ, ವಾಮನ ಪೈ, ಕಾರ್ಯನಿರ್ವಹಣಾ ನಿರ್ದೇಶಕ ಪ್ರೊ.ಎ.ವಿ.ನಾರಾಯಣ, ವಿವಿಧ ವಿವೇಕಾನಂದ ಆಡಳಿತ ಮಂಡಳಿಗಳ ಪದಾಧಿಕಾರಿಗಳಾದ ಪಿ.ಶ್ರೀನಿವಾಸ ಪೈ, ಎಂ.ಟಿ.ಜಯರಾಮ ಭಟ್, ಮುರಳೀಧರ ಭಟ್, ಕೃಷ್ಣ ನಾಯಕ್, ವಿವಿಧ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರುಗಳಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಡಾ.ಎಂ.ಎಸ್.ಗೋವಿಂದೇ ಗೌಡ, ಪ್ರೊ.ಜೀವನ್ ದಾಸ್ ಎ, ಪ್ರೊ.ಗೋಪಿನಾಥ ಶೆಟ್ಟಿ, ಎನ್.ಸಿ.ಸಿ ಅಧಿಕಾರಿ ಕ್ಯಾ.ಡಿ.ಮಹೇಶ್ ರೈ ಹಾಗೂ ವಿವಿಧ ಸಂಸ್ಥೆಗಳ ಪ್ರಾಧ್ಯಾಪಕರುಗಳು ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಿಂದ ಝಂಡಾ ಊಂಚಾ ರಹೇ ಹಮಾರಾ, ವಂದೇ ಮಾತರಂ ಗೀತೆಗಳ ಗಾಯನ ನಡೆಯಿತು. ವಿವೇಕಾನಂದ ಕಾಲೇಜಿನ ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್‍ಸ್ ಅಂಡ್ ರೇಂಜರ್‍ಸ್ ತಂಡದವರು ಹಾಜರಿದ್ದರು.