ವಿವೇಕಾನಂದದಲ್ಲಿ ಒಂದು ವಾರದ ಪತ್ರಿಕೋದ್ಯಮ ಶಿಬಿರ ಉದ್ಘಾಟನೆ – ಸಿದ್ಧತೆಯಿದ್ದಾಗ ಬದ್ಧತೆಯುಳ್ಳ ಪತ್ರಕರ್ತನಾಗಲು ಸಾದ್ಯ: ಪ್ರೊ.ವಿ.ಬಿ.ಅರ್ತಿಕಜೆ
ಪುತ್ತೂರು: ಪತ್ರಿಕೋದ್ಯಮ ಒಂದು ಪ್ರಭಾವಿ ಮಾಧ್ಯಮ. ಅಭಿವ್ಯಕ್ತಿ ಸ್ವಾತಂತ್ರ್ಯದ ಇನ್ನೊಂದು ರೂಪವೇ ಪತ್ರಿಕೋದ್ಯಮ. ಉತ್ತಮ ಪತ್ರಕರ್ತನಾಗಲು ಪೂರ್ವಭಾವಿ ಸಿದ್ಧತೆಯ ಅಗತ್ಯವಿದೆ. ಪತ್ರಕರ್ತನಾದವನಿಗೆ ಸಮಾಜದ ಆಗುಹೋಗುಗಳ ಅರಿವಿರಬೇಕು. ಪ್ರತಿಯೊಂದು ವಿಚಾರಗಳಿಗಿರುವ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ಇರಬೇಕು. ಸಮಾಜದಲ್ಲಿ ನಡೆಯುವ ವಿಚಾರಗಳ ಗ್ರಹಣ ಶಕ್ತಿಯಿರಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಮತ್ತು ಹಿರಿಯ ಪತ್ರಕರ್ತ ಪ್ರೊ.ವಿ.ಬಿ.ಅರ್ತಿಕಜೆ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ, ನಯನ ಫೋಟೋಗ್ರಾಫಿಕ್ ಕ್ಲಬ್ ಮತ್ತು ಕನ್ನಡ ಸಂಘದ ಜಂಟಿ ಆಶ್ರಯದಲ್ಲಿ ಪತ್ರಿಕೋದ್ಯಮದ ಹೊರತಾದ ವಿದ್ಯಾರ್ಥಿಗಳಿಗಾಗಿ ನಡೆದ ಒಂದು ವಾರದ ಪತ್ರಿಕೋದ್ಯಮ ಶಿಬಿರವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಪತ್ರಕರ್ತನಾದವನಿಗೆ ಸುದ್ದಿಯ ಮೌಲ್ಯ ತಿಳಿದಿರಬೇಕು, ಮಾತ್ರವಲ್ಲದೇ ಜನರ ಮನಸ್ಸನ್ನು ಅರಳಿಸುವಂತಹ ವಿಚಾರಗಳನ್ನೂ ವರದಿ ಮಾಡಬೇಕು. ಸಾಮಾಜಿಕ ವರದಿಗಳನ್ನು ಪ್ರಕಟಿಸುವಾಗ ಎಚ್ಚರದಿಂದ ಇರುವುದು ಅಗತ್ಯ. ಮುಖ್ಯವಾಗಿ ವಿಷಯವನ್ನು ಗ್ರಹಿಸುವ ಸಾಮರ್ಥ್ಯ ಇರಬೇಕು. ವಿಚಾರದ ಬದ್ಧತೆಯಿರಬೇಕು. ಮಾತ್ರವಲ್ಲದೇ ವಿಚಾರಗಳ ಪ್ರಧಾನತೆಯನ್ನು ವಿವೇಚಿಸುವ ಶಕ್ತಿ ಇರಬೇಕು. ಆಗ ಮಾತ್ರ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್‍ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಬರಹಗಾರನಿಗೆ ವಿಚಾರಗಳ ಬಗ್ಗೆ ಪ್ರಾಮುಖ್ಯತೆಯ ಅರಿವಿರಬೇಕು. ಅಲ್ಲದೇ ತರಬೇತಿಯಿದ್ದಾಗ ಮಾತ್ರ ಉತ್ತಮ ಬರವಣಿಗೆಗಳು ಮೂಡಲು ಸಾಧ್ಯ. ಪತ್ರಿಕೋದ್ಯಮ ಶಿಬಿರದಲ್ಲಿ ಬರವಣಿಗೆಯ ತರಬೇತಿಯನ್ನು ಪಡೆಯಬಹುದು. ಶಿಬಿರದಲ್ಲಿ ಕಲಿತ ಅಂಶಗಳು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಹಾಯಕವಾಗುತ್ತವೆ. ಬರವಣಿಗೆಯಲ್ಲಿ ಪ್ರಭುತ್ವವನ್ನು ಪಡೆಯಲು ಪತ್ರಿಕೋದ್ಯಮ ಶಿಬಿರವು ಒಂದು ಉತ್ತಮ ವೇದಿಕೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವಿದ್ಯಾರ್ಥಿ ಶಿವಶಂಕರ ಮಯ್ಯ ಪ್ರಾರ್ಥಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ನಯನಾ ಫೋಟೋಗ್ರಾಫಿಕ್ ಕ್ಲಬ್‌ನ ಸಂಚಾಲಕ ಡಾ.ಶ್ರೀಧರ್.ಎಚ್.ಜಿ ವಂದಿಸಿದರು. ವಿದ್ಯಾರ್ಥಿನಿ ಫಾತಿಮತ್ ನಿಶ್ಮಾ ನಿರ್ವಹಿಸಿದರು.