ವಿವೇಕಾನಂದದಲ್ಲಿ ಗುರುಪೂರ್ಣಿಮಾ ಆಚರಣೆ
ಪುತ್ತೂರು: ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ನೀಡುವಾತ ಗುರು. ಅಂತಹ ಗುರುಗಳಲ್ಲಿ ವಿಶ್ವಗುರು ಎಂದೆನ್ನಿಸಿದ ವೇದವ್ಯಾಸರ ಜನ್ಮದಿನವನ್ನು ಗುರು ಪೂರ್ಣಿಮಾ ದಿನವಾಗಿ ಆಚರಿಸಲಾಗುತ್ತಿದೆ. ಜೀವನಕ್ಕೆ ಒಂದು ಉತ್ತಮ ಅರ್ಥ ಬರಬೇಕಾದರೆ ತಿಳುವಳಿಕೆ ಕೊಡುವವರು ಗುರುಗಳು. ಜೀವನಕ್ಕೆ ಮೌಲ್ಯ ದೊರಕಿಸಿ ಕೊಡುವವರು ಗುರುಗಳು ಎಂದು ಸಾಹಿತ್ಯ ಶಿರೋಮಣಿ ಮತ್ತು ಆಯುರ್ವೇದ ಶಿರೋಮಣಿ ಪ್ರೊ. ಚೌಕಾರ್ ಪರಮೇಶ್ವರ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ’ವಿಕಾಸಂ’ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ನಡೆದ ಗುರು ಪೂರ್ಣಿಮಾ ಆಚರಣೆ ಮತ್ತು ವಿಕಾಸಂ ಸಂಸ್ಕೃತ ಸಂಘದ ಉದ್ಘಾಟನೆಯನ್ನು ನಡೆಸಿ ಮಂಗಳವಾರ ಮಾತನಾಡಿದರು.
ಮೌಲ್ಯಯುತವಾದ ಜ್ಞಾನವನ್ನು ಉಪದೇಶಗಳನ್ನು ಒದಗಿಸಿಕೊಟ್ಟವರು ವೇದವ್ಯಾಸರು. ಅಂತಹ ವ್ಯಾಸರನ್ನು ನೆನೆಯಬೇಕು. ಲೋಕಕ್ಕೆ ಹಿತವಾಗಲಿ ಎಂದು ನಮ್ಮ ಹಿರಿಯರು ವೇದಗಳನ್ನು ರಚಿಸಿದ್ದಾರೆ. ವೇದಗಳು ಭಾರತದ ಸಂಸ್ಕೃತಿಯನ್ನು ತಿಳಿಸುತ್ತವೆ. ಮಾತ್ರವಲ್ಲದೇ ಭಾರತದ ಮೂಲದ ಬಗ್ಗೆ ತಿಳಿಯಲು ಸಂಸ್ಕೃತದ ಅಧ್ಯಯನದ ಅಗತ್ಯವಿದೆ. ವಿದ್ಯಾರ್ಥಿಗಳು ಸಂಸ್ಕೃತವನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಸಂಸ್ಕೃತವು ಅತ್ಯಂತ ಪ್ರಾಚೀನವಾದ ಶುದ್ಧ ಮತ್ತು ಸೌಂದರ್ಯವುಳ್ಳ ಭಾಷೆ. ಇದಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ಈ ಬಗೆಗೆ ಅನೇಕ ಲಿಖಿತ ದಾಖಲೆಗಳೂ ದೊರೆಯುತ್ತಿವೆ. ಹೊರ ದೇಶಗಳಲ್ಲೂ ಸಂಸ್ಕೃತ ಪ್ರಚಲಿತದಲ್ಲಿದೆ. ಸಂಸ್ಕೃತವು ಎಲ್ಲಾ ಭಾಷೆಗಳ ಹುಟ್ಟಿಗೆ ಕಾರಣವಾದುದು. ಜ್ಞಾನಾಭಿವೃದ್ಧಿಗೆ ಸಂಸ್ಕೃತದ ಅಧ್ಯಯನದ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಜಯರಾಮ ಭಟ್ ಮಾತನಾಡಿ ಗುರು ಎಂದರೆ ಜ್ಞಾನದ ಬೆಳಕು. ವ್ಯಾಸರು ಜ್ಞಾನರಾಶಿಯಾದ ವೇದವನ್ನು ನಮಗೆ ಕೊಟ್ಟವರು. ಅಂಧಕಾರವನ್ನು ಹೋಗಲಾಡಿಸಿದವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟಕ ಪ್ರೊ.ಚೌಕಾರ್ ಪರಮೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು. ವಿಕಾಸಂ ಸಂಸ್ಕೃತ ಸಂಘದ ಸಂಯೋಜಕ ಡಾ. ಶ್ರೀಶಕುಮಾರ ಯಂ.ಕೆ ಪ್ರಸ್ತಾವನೆ ಗೈದರು. ಸಂಘದ ಅಧ್ಯಕ್ಷ ಜ್ಯೇಷ್ಠರಾಜ ಸ್ವಾಗತಿಸಿ, ಕಾರ್ಯದರ್ಶಿ ಅನನ್ಯಲಕ್ಷ್ಮಿ ವಂದಿಸಿದರು. ವಿದ್ಯಾರ್ಥಿನಿ ಸಾಯಿಶ್ರೀ ಪದ್ಮ ನಿರ್ವಹಿಸಿದರು.