ವಿವೇಕಾನಂದದಲ್ಲಿ ನಂದ ಕುಮಾರ್ಗೆ ಬೀಳ್ಕೊಡುಗೆ – ವಿಷಯ ತಜ್ಞತೆಯಿಂದ ಯಶಸ್ಸು ಪ್ರಾಪ್ತಿ : ಡಾ.ಪೀಟರ್ ವಿಲ್ಸನ್ ಪ್ರಭಾಕರ್
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ 41 ವರ್ಷಗಳ ಕಾಲ ನಾಲ್ಕನೇ ದರ್ಜೆ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ ನಂದ ಕುಮಾರ್ ಅವರು ಜುಲೈ 31ಕ್ಕೆ ನಿವರತ್ತರಾದ ಹಿನ್ನಲೆಯಲ್ಲಿ ಕಾಲೇಜಿನ ಶಿಕ್ಷಕ, ಶಿಕ್ಷಕೇತರ ಸಂಘ ಹಾಗೂ ಆಡಳಿತ ಮಂಡಳಿಯ ವತಿಯಿಂದ ಶನಿವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಹಿಂದಿನ ದಿನಗಳಲ್ಲಿ ಕೈಗಾರಿಕಾ ವಲಯದಲ್ಲಿ ಮಾತ್ರ ಸ್ಪೆಶಲೈಸೇಶನ್ ಅಥವ ವಿಶೇಷ ಪರಿಣತಿ ಎಂಬ ವಿಭಾಗ ಇತ್ತು. ಆದರೆ ಈಗ ಶಿಕ್ಷಣ ಕ್ಷೇತ್ರಕ್ಕೂ ಅದು ವ್ಯಾಪಿಸಿದೆ. ಇಲ್ಲಿಯೂ ಪ್ರತಿಯೊಂದು ವಿಷಯಗಳಲ್ಲಿ ತಜ್ಞತೆಯೊಂದಿಗೆ ಕೆಲವೊಂದು ವಿಷಯಗಳಲ್ಲಿ ವಿಶೇಷ ತಜ್ಞತೆ ಹೊಂದಿದ್ದರೆ ಹೆಚ್ಚಿನ ಯಶಸ್ಸನ್ನು ಪಡೆಯಬಹುದು. ನಂದ ಕುಮಾರ್ ಅವರು ಪರೀಕ್ಷಾ ವಿಷಯಗಳಲ್ಲಿ ಅಪಾರ ಆಸಕ್ತಿ ಹೊಂದಿ ಕಾರ್ಯನಿರ್ವಹಿಸುತ್ತಿದ್ದರು ಎಂದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ ಮಾತನಾಡಿ ನಂದ ಕುಮಾರ್ ಮಿತಭಾಷಿ ಹಾಗೂ ಹೆಚ್ಚು ದುಡಿಯುವ ಮನೋಭಾವದವರು. ಯಾರಿಗೇ ಆಗಲಿ ಅವರ ವ್ಯಕ್ತಿತ್ವದ ಬಗೆಗೆ ಆಸಕ್ತಿ ಮೂಡದಿರದು ಎಂದರು. ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ ನಿಷ್ಟೆ ಶ್ರದ್ಧೆಯಿಂದ ಕೆಲಸ ಮಾಡಿದವರು ಸರ್ವತ್ರ ವಂದನೆಗೆ ಪಾತ್ರರಾಗುತ್ತಾರೆ. ಅಂತಹವರು ಕಾನೂನು ಪ್ರಕಾರ ನಿವೃತ್ತಿಯಾದರೂ ಸಂಸ್ಥೆಯ ಬಾಗಿಲು ಸದಾ ತೆರೆದಿರುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಶಿಕ್ಷಕ ಸಂಘದ ಅಧ್ಯಕ್ಷ ಪ್ರೊ.ವೆಂಕಟ್ರಮಣ ಭಟ್, ಕಾಲೇಜಿನ ಕಛೇರಿ ಅಧೀಕ್ಷಕ ಮುರಳೀಧರ ಎ ಅನಿಸಿಕೆ ವ್ಯಕ್ತಪಡಿಸಿದರು. ನಂದ ಕುಮಾರ್ ದಂಪತಿಗಳನ್ನು ಗೌರವಿಸಲಾಯಿತು.
ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷ ಗುರುರಾಜ್ ಸ್ವಾಗತಿಸಿದರು. ಶಿಕ್ಷಕ ಸಂಘದ ಕಾರ್ಯದರ್ಶಿ ಡಾ.ಆಶಾ ಸಾವಿತ್ರಿ ವಂದಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.