ವಿವೇಕಾನಂದದಲ್ಲಿ ನಾಟಕ ಪಠ್ಯಗಳ ಕುರಿತು ವಿಚಾರ ಸಂಕಿರಣ
ಪುತ್ತೂರು: ನಾಟಕವನ್ನು ಕೇವಲ ಓದುವುದು ಅಭಿನಯಿಸುವುದಷ್ಟೇ ಅಲ್ಲದೆ ಅರ್ಥೈಸಿಕೊಳ್ಳುವುದೂ ಅಗತ್ಯ. ಹಾಗೆ ನಾಟಕದ ಬಗೆಗೆ ತಿಳಿದುಕೊಳ್ಳುತ್ತಾ ಅಧ್ಯಯನದಲ್ಲಿ ತೊಡಗಿದರೆ ಅದು ಹೆಚ್ಚಿನ ಪರಿಣಾಮವನ್ನು ಕೊಡಬಲ್ಲದು. ನಾಟಕಕ್ಕೆ ಅತ್ಯಂತ ಹೆಚ್ಚಿನ ಸಂವಹನ ಶಕ್ತಿ ಇದೆ. ವಿದ್ಯಾರ್ಥಿಗಳು ಬರೀ ಅಂಕಗಳಿಗಾಗಿ ಮಾತ್ರ ನಾಟಕವನ್ನು ಓದದೇ, ಬದುಕನ್ನು ರೂಪಿಸುವುದಕ್ಕೆ ನಾಟಕವನ್ನು ಅಭ್ಯಾಸ ಮಾಡಬೇಕು ಎಂದು ಪುತ್ತೂರಿನ ರಂಗಕರ್ಮಿ ಐ.ಕೆ ಬೊಳುವಾರು ಹೇಳಿದರು.
ಅವರು ಶುಕ್ರವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಮಂಗಳೂರು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ ವಿಕಾಸ ಮತ್ತು ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ನಡೆದ ದ್ವಿತೀಯ ಸೆಮಿಸ್ಟರ್ ನಾಟಕ ಪಠ್ಯಗಳ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಆರಂಭದ ಹಂತದಲ್ಲಿ ನಾಟಕ ಕಂಪನಿಗಳು ನಾಟಕಗಳನ್ನು ಪ್ರದರ್ಶಿಸುತ್ತಿದ್ದವು. ಆಗಿನ ಕಾಲದಲ್ಲಿ ಅದು ವೃತ್ತಿಯಾಗಿತ್ತು. ಯಾವಾಗ ಸಿನೆಮಾಗಳ ಪ್ರವೇಶವಾಯಿತೋ ನಾಟಕಗಳು ಹಿಂದೇಟು ಹಾಕಿತು. ಆ ಕಾರಣದಿಂದಾಗಿ ನಾಟಕಗಳಲ್ಲಿ ಅನೇಕ ಬದಲಾವಣೆಗಳಾದವು. ಕಾಲಾಂತರದಲ್ಲಿ ಹೊಸ ರೀತಿಯ ನಾಟಕಗಳು ಹುಟ್ಟಿಕೊಂಡವು ಎಂದು ನುಡಿದರು.
ನಾಟಕವನ್ನು ಹೇಗೆ ಓದಬೇಕು, ಹೇಗೆ ಅರ್ಥೈಸಿಕೊಳಬೇಕು ಎಂಬುವುದನ್ನು ತಿಳಿಯಲು ಪಠ್ಯ ಪುಸ್ತಕಗಳು ಸಹಕರಿಸಿತ್ತವೆ. ಪಠ್ಯ ಪುಸ್ತಕಗಳು ನಾಟಕಗಳ ಬಗ್ಗೆ ಸಮಗ್ರವಾದ ಪರಿಚಯವನ್ನು ನೀಡುತ್ತವೆ. ನಾಟಕವನ್ನು ಕಟ್ಟುವುದು ಒಂದು ಅದ್ಬುತ ಕಲೆಯಾಗಿದೆ. ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್ ಮಾಧವ ಭಟ್ ಮಾತನಾಡಿ, ಮನುಷ್ಯನನ್ನು ಮನುಷ್ಯನ ಗಾತ್ರದಲ್ಲಿ ನಿಜವಾದ ಮನುಷ್ಯನಾಗಿ ಪ್ರಸ್ತುತಪಡಿಸುವುದು ನಾಟಕ. ಭಾಷಾ ಅಧ್ಯಾಪಕನಿಗೆ ಶಬ್ಧಗಳನ್ನು ಚಿತ್ರಗಳನ್ನಾಗಿ ಪರಿವರ್ತಿಸುವ ಸಾಮರ್ಥ್ಯವಿರಬೇಕು. ಆತನಿಗೆ ತುಲಾನಾತ್ಮಕ ನಟನೆ ತಿಳಿದಿರಬೇಕು. ಒಬ್ಬ ನಟನಿಗೆ ನಾಟಕ ಮತ್ತು ಬದುಕಿನ ನಡುವಿನ ಅಂತರ ತಿಳಿದಿರಬೇಕು ಎಂದು ತಿಳಿ ಹೇಳಿದರು.
ಕಾರ್ಯಕ್ರಮದ ಇನ್ನೊರ್ವ ಅತಿಥಿ ವಿಕಾಸದ ಅಧ್ಯಕ್ಷ ಪ್ರೊ.ಕೃಷ್ಣಮೂರ್ತಿ ಪ್ರಾಸ್ತವಿಕ ಮಾತನ್ನಾಡಿದರು. ವಿಕಾಸದ ಕಾರ್ಯದರ್ಶಿ ಡಾ. ಪ್ರಕಾಶ್ ಚಂದ್ರ ಶಿಶಿಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಾದ ಸ್ವಾತಿ ಸುಬ್ರಹ್ಮಣ್ಯ, ಮೇಘಾ ಕುಕ್ಕುಜೆ ಮತ್ತು ರಶ್ಮಿ ನಾಟಕಕಾರ ಪು.ತಿ.ನ ಅವರ ಹಾಡನ್ನು ಹಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಹಾಗೂ ಕನ್ನಡ ಸಂಘದ ಸಂಯೋಜಕಿ ಗೀತಾ ಕುಮಾರಿ.ಟಿ ನಿರೂಪಿಸಿದರು. ವಿದ್ಯಾರ್ಥಿ ವಿಶ್ವನಾಥ.ಎನ್ ವಂದಿಸಿದರು.