VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದದಲ್ಲಿ ಬಂದಗದ್ದೆ ನಾಗರಾಜರಿಗೆ ಶಂಕರ ಸಾಹಿತ್ಯ ಪ್ರಶಸ್ತಿ ಪ್ರಧಾನ – ಯಶಸ್ಸು ಗಳಿಸಲು ಗುರಿ ಮತ್ತು ಗುರು ಅಗತ್ಯ : ಜಿ. ಕೆ. ಭಟ್

ಪುತ್ತೂರು: ನಮ್ಮ ಸಂಸ್ಕೃತಿ ಪರಂಪರೆಯಿಂದ ತಿಳಿಯಬೇಕಾದದ್ದು ಸಾಕಷ್ಟಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಅನೇಕರಿಗೆ ಪಂಪ, ರನ್ನರ ಕಾವ್ಯಗಳನ್ನು ಓದಲು ಸಾಧ್ಯವಾಗುತ್ತಿಲ್ಲ. ಅನೇಕ ಅಧ್ಯಾಪಕರಿಗೆ ಪದಚ್ಛೇಧವನ್ನು ಮಾಡಲು ತಿಳಿಯುತ್ತಿಲ. ಇದಕ್ಕೆ ಕಾರಣ ನಮ್ಮ ಶಿಕ್ಷಣ ಪದ್ಧತಿ. ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಸುಲಭವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದೇ ಇದಕ್ಕೆ ಕಾರಣ ಎಂದು ಹಿರಿಯ ವಿದ್ವಾಂಸ ನಾಗರಾಜ ಬಂದಗದ್ದೆ ಹೇಳಿದರು.

News Photo - Shankara Sahithya Prashasthi

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ಸಂಘ, ಕನ್ನಡ ವಿಭಾಗ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಯುಕ್ತ ಸಹಭಾಗಿತ್ವದಲ್ಲಿ ಸಿದ್ಧಮೂಲೆ ಶಂಕರನಾರಾಯಣ ಭಟ್ ಪ್ರತಿಷ್ಠಾಪಿತ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಬುಧವಾರ ಮಾತನಾಡಿದರು.

ಸೂರ್ಯನ ಬಗ್ಗೆ ಸಂಸ್ಕೃತದಲ್ಲಿ ಸಾಹಿತ್ಯಗಳಿವೆಯಾದರೂ ಕನ್ನಡದಲ್ಲಿ ಕಾವ್ಯಗಳು ಬಂದಿಲ್ಲ. ಅದಕ್ಕಾಗಿ ಶ್ರೀಮದ್ ಆದಿತ್ಯ ದರ್ಶನ ಎಂಬ ಕಾವ್ಯವನ್ನು ಬರೆದು ಸೂರ್ಯನ ಮಹತ್ವವನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಬೇಕೆಂದು ಯೋಚಿಸಿದ್ದೇನೆ. ಗೋವುಗಳ ಬಗೆಗೆ ಕೃತಿಯೊಂದನ್ನು ಬರೆದು ಗೋವುಗಳ ಮಹತ್ವವನ್ನು ತಿಳಿಸಿಕೊಟ್ಟಿರುವ ಸಿದ್ಧಮೂಲೆ ಶಂಕರನಾರಾಯಣ ಭಟ್ಟರು ಪ್ರತಿಷ್ಠಾಪಿಸಿದ ಸಾಹಿತ್ಯ ಪ್ರಶಸ್ತಿಯನ್ನು ಪಡೆಯುವುದು ಭಾಗ್ಯ ಎಂದರಲ್ಲದೇ ಮೂಲ ಮಂತ್ರಗಳ ಉಪಾಸನೆಯಿಂದ ಕಳೆದು ಹೋದ ಆರೋಗ್ಯವನ್ನು ಸಂಪಾದಿಸಲು ಸಾಧ್ಯ ಎಂದು ಹೇಳಿದರು.

ಅಭಿನಂದನಾ ಭಾಷಣ ಮಾಡಿದ ನಿವೃತ್ತ ಪ್ರಾಧ್ಯಾಪಕ ಜಿ.ಕೆ. ಭಟ್ ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿ ಯಶಸ್ಸನ್ನು ಪಡೆಯಬೇಕಾದರೆ ಗುರಿ ಮತ್ತು ಗುರು ಅತೀ ಮುಖ್ಯವಾದದ್ದು. ಅವೆರಡೂ ಬಂದಗದ್ದೆ ನಾಗರಾಜರಿಗೆ ಸಿದ್ಧಿಸಿದೆ. ಅವರ ಕವಿತ್ವದ ಶಕ್ತಿ ರಕ್ತಗತವಾಗಿಯೇ ಬಂದಿರುವುದೆಂದು ಹೇಳಬಹುದು. ಇದರ ಪರಿಣಾಮವಾಗಿಯೇ ಮೂರು ಮಹಾಕಾವ್ಯಗಳನ್ನು ರಚಿಸಲು ಇವರಿಂದ ಸಾಧ್ಯವಾಗಿದೆ. ಮಾತ್ರವಲ್ಲದೇ ನಾಟಕ ರಚನೆಯಲ್ಲಿ, ಯಕ್ಷಗಾನದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವರು ಎಂದರು.

ಸಂಸ್ಕೃತ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿರುವ ನಾಗರಾಜರ ಹೆಸರು ಸ್ಥಳೀಯರಿಗೆ ಪರಿಚಿತವಿಲ್ಲವಾದರೂ ಉತ್ತರ ಭಾರತದವರೆಗೆ ವ್ಯಾಪಿಸಿದೆ. ಕುವೆಂಪುರವರ ಶ್ರೀರಾಮಾಯಣ ದರ್ಶನಂ ಕಾವ್ಯದ ನಂತರದ ಕಾಲದಲ್ಲಿ ಬಂದ ಮಹತ್ ಗ್ರಂಥವೆಂದೇ ಇವರ ಕಾವ್ಯಗಳನ್ನು ಗುರುತಿಸಬಹುದು. ಶ್ರೀಮದ್ ವಿಷ್ಣುಪುರಾಣವನ್ನು ಭಾಮಿನಿ ಪಟ್ಪದಿಯಲ್ಲಿಯೂ, ಶ್ರೀಮದ್ ಗಣೇಶ ಪುರಾಣವನ್ನು ವಾರ್ಧಕ ಷಟ್ಪದಿಯಲ್ಲಿಯೂ ಮತ್ತು ಶ್ರೀಮದ್ ಭುವನೇಶ್ವರಿ ಕಥಾ ಮಂಜರಿಯನ್ನು ಬರೆದಿರುವರು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾ ಅಧಿಕಾರಿ ಪ್ರೊ.ಎ.ವಿ. ನಾರಾಯಣ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್‌ವಿಲ್ಸನ್ ಪ್ರಭಾಕರ್ ಸ್ವಾಗತಿಸಿ, ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಚ್.ಜಿ. ಶ್ರೀಧರ ಪ್ರಸ್ತಾವಿಸಿದರು. ಕನ್ನಡ ಉಪನ್ಯಾಸಕ ಡಾ.ರೋಹಿಣಾಕ್ಷ ಶಿರ್ಲಾಲು ವಂದಿಸಿ, ಉಪನ್ಯಾಸಕಿ ಡಾ. ಗೀತಾ ಕುಮಾರಿ ನಿರೂಪಿಸಿದರು.