ವಿವೇಕಾನಂದದಲ್ಲಿ ಮಾನ್ಸೂನ್ ಚೆಸ್ ಪಂದ್ಯಾಟ ಸಮಾರೋಪ – ನಿಹಾಲ್ ಮಂಜುನಾಥ್ ವಿನ್ನರ್, ಶಾಬ್ಧಿಕ್ ವರ್ಮ ರನ್ನರ್
ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಶ್ರಯದಲ್ಲಿ ಸಂಘಟಿಸಲ್ಪಟ್ಟ ೩೭ನೆಯ ಮಾನ್‌ಸೂನ್ ಚೆಸ್ ಸ್ಫರ್ಧೆಯ ಪ್ರಥಮ ಸ್ಥಾನವನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ನಿಹಾಲ್ ಮಂಜುನಾಥ್ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಉಜಿರೆ ಎಸ್.ಡಿ.ಎಂ ಕಾಲೇಜಿನ ಶಾಬ್ಧಿಕ್ ವರ್ಮ ಪಡೆದುಕೊಂಡರು.
೯ ಸುತ್ತುಗಳಲ್ಲಿ ನಡೆದ ಈ ಪಂದ್ಯಾಟದಲ್ಲಿ ನಿಹಾಲ್ ಮಂಜುನಾಥ್ ೮.೫ ಅಂಕ ಪಡೆದರೆ ಶಾಬ್ಧಿಕ್ ವರ್ಮ ೭.೫ ಅಂಕ ದಾಖಲಿಸಿದರು. ಅಲ್ಲದೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿತಿನ್ ಎಸ್ ಶೆಟ್ಟಿ, ಮುಕ್ಕ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ಹರ್ಮಾನ್ ದಿಯಾನ್ ಸಲ್ಡಾನಾ, ಮಡಿಕೇರಿ ಎಫ್.ಎಂ.ಕೆ.ಎಂ.ಸಿ ಯ ಆಗಸ್ಟಿನ್ ಎ, ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನ ಶ್ರೀಶಾಂತ್ ಎಸ್ ರಾವ್, ಮಂಗಳೂರಿನ ಕೆನರಾ ಕಾಲೇಜಿನ ಪ್ರಶಾಂತ್ ಕಾಮತ್, ಮಂಗಳೂರಿನ ಅಲೋಷಿಯಸ್ ಕಾಲೇಜಿನ ಆಂಡ್ರಿಯಾ ಡಿಸೋಜ ಹಾಗೂ ಬಸ್ರೂರಿನ ಶಾರದಾ ಕಾಲೇಜಿನ ಸಚಿನ್ ಕ್ರಮವಾಗಿ ಮೊದಲ ಹತ್ತು ಸ್ಥಾನಗಳನ್ನು ಗಳಿಸಿಕೊಂಡರು.
ವಿವೇಕಾನಂದ ಕಾಲೇಜಿನ ರೆನಿಟಾ ಡಿಸೋಜ, ಮಧುರಾ ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮಿಥಿಲಾ ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಚದುರಂಗದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚುತ್ತದೆ. ಶೈಕ್ಷಣಿಕ ಸಾಧನೆ ಹೆಚ್ಚಿಸುವಲ್ಲಿ ಚದುರಂಗವು ಪ್ರಮುಖ ಪಾತ್ರವಹಿಸುತ್ತದೆ. ನಿರ್ದಿಷ್ಟ ವಿಚಾರಗಳ ಕಡೆಗೆ ಗಮನ ಹೆಚ್ಚಿಸುವುದಕ್ಕೆ ಇದು ಸಹಕಾರಿಯಾಗುತ್ತದೆ ಮತ್ತು ಸೃಜನಾತ್ಮಕತೆ ಮತ್ತು ರಚನಾತ್ಮಕತೆ ಉತ್ತಮಗೊಳಿಸುವಲ್ಲಿ ಮಹತ್ವರದ ಪಾತ್ರವಹಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತಾನಾಡಿ ಚದುರಂಗ ಬುದ್ಧಿಶಕ್ತಿ ಬೆಳೆಯಲು ಸಹಕಾರಿ. ಬೌದ್ಧಿಕ ಕ್ಷಮತೆಯನ್ನು ಕೇವಲ ಆಟಕ್ಕೋಸ್ಕರವಲ್ಲದೇ ಜೀವನಕ್ಕೂ ಬಳಸಿಕೊಳ್ಳಬೇಕು ಎಂದು ನುಡಿದರು.
ಮಂಗಳೂರಿನ ದೈಹಿಕ ಶಿಕ್ಷಣ ನಿರ್ದೆಶಕ ಪ್ರಸನ್ನ ರಾವ್ ಪಂದ್ಯಾಟದ ಮುಖ್ಯ ತೀರ್ಪುಗಾರರಾಗಿ ಸಹಕರಿಸಿದರು. ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಕಿ ಡಾ. ಜ್ಯೋತಿ ಸ್ವಾಗತಿಸಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೆಶಕ ಯತೀಶ್ ಕುಮಾರ್ ಬಿ ವಂದಿಸಿದರು. ವಿದ್ಯಾರ್ಥಿ ಶೋಭಿತ್ ನಿರ್ವಹಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಎ ಎಸ್ ಕಾರ್ಯಕ್ರಮ ಸಂಯೋಜಿಸಿದರು.