ವಿವೇಕಾನಂದದಲ್ಲಿ ರಾಜ್ಯಮಟ್ಟದ ಮಾಧ್ಯಮ ಗೋಷ್ಠಿ ಸಮಾರೋಪ – ವಿಚಾರಗಳ ಬಗೆಗಿನ ತುಡಿತ ಪತ್ರಿಕೊದ್ಯಮದ ಯಶಸ್ಸಿನ ಗುಟ್ಟು : ಪ್ರಕಾಶ್ ಇಳಂತಿಲ
ಪುತ್ತೂರು: ಸ್ವಾತಂತ್ರ್ಯ ಪೂರ್ವದಲ್ಲೇ ಪತ್ರಿಕೋದ್ಯಮವಿತ್ತು. ಪತ್ರಿಕೋದ್ಯಮ ಶ್ರದ್ಧೆಯ ಭಾಗವಾಗಿತ್ತು. ಕೆಡುಕಿನ ವಿರುದ್ಧ ಹೋರಾಡುವುದೇ ಪತ್ರಿಕೋದ್ಯಮದ ಮುಖ್ಯ ಉದ್ದೇಶ. ನಕರಾತ್ಮಕ ವಿಷಯಗಳ ವೈಭವೀಕರಣ ಪತ್ರಿಕೋದ್ಯಮದಲ್ಲಿ ಸಲ್ಲದು. ಸಮಾಜದ ಉತ್ತಮ ಕಾರ್ಯಗಳ ವರದಿಯನ್ನು ಮಾಡಬೇಕು. ಸುದ್ದಿ ಮೌಲ್ಯದ ಆಧಾರದ ಮೇಲೆ ವರದಿಯನ್ನು ಪ್ರಕಟಿಸಬೇಕು ಎಂದು ಹೊಸದಿಗಂತದ ಸ್ಥಾನಿಕ ಸಂಪಾದಕ ಪ್ರಕಾಶ್ ಇಳಂತಿಲ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಸ್ತುತ ವರ್ಷ ಪೂರ್ತಿ ನಡೆಯಲಿರುವ ಪತ್ರಿಕೋದ್ಯಮ ವಿಭಾಗದ ದಶಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಯ ಅಂಗವಾಗಿ ನಡೆದ ರಾಜ್ಯಮಟ್ಟದ ಮಾಧ್ಯಮಗೋಷ್ಠಿಯ ಸಮಾರೋಪ ಶನಿವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತದ ಪತ್ರಿಕೋದ್ಯಮ ವಿದೇಶೀ ಪತ್ರಿಕೋದ್ಯಮಗಳಿಗಿಂತ ಭಿನ್ನ. ಉನ್ನತ ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ. ಪತ್ರಿಕೋದ್ಯಮವು ಹಿಂದೆ ಪ್ರವೃತ್ತಿಯಾಗಿತ್ತು. ಪತ್ರಿಕಾ ಸ್ವಾತಂತ್ಯ್ರದ ಪ್ರತಿಪಾದನೆಯ ಅವಲೋಕನ ಅಗತ್ಯ. ಪತ್ರಕರ್ತರು ಮಾನಸಿಕವಾಗಿ ಸಮಾಜದೊಂದಿಗೆ ಬೆರೆಯುವ ಅಗತ್ಯವಿದೆ. ಹೊಸತನವನ್ನು ಹುಟ್ಟುಹಾಕಬೇಕು. ಸಮತೋಲನ ವಿವೇಕಗಳು ಇದ್ದಾಗ ಮಾತ್ರ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದರು.
ಮತ್ತೋರ್ವ ಅತಿಥಿ ಮಂಗಳೂರಿನ ಉದಯವಾಣಿಯ ವರದಿಗಾರ್ತಿ ಧನ್ಯಾ ಬಾಳಕಜೆ ಮಾತನಾಡಿ ವಿಚಾರಗಳನ್ನು ಅರಿತುಕೊಳ್ಳಲು ಮುಖ್ಯ ವೇದಿಕೆ ಪತ್ರಿಕೋದ್ಯಮ. ವಿಚಾರಗಳನ್ನು ಅರಸುವುದೇ ಪತ್ರಕರ್ತನಾದವನ ಕೆಲಸ. ಪ್ರೀತಿ ಪ್ರೇಮ ಸ್ನೇಹಗಳ ಬಗೆಗೆ ಮಾತ್ರ ಬರೆಯದೆ ಚಿಂತನಾಧಾರಿತ ವಿಚಾರಗಳ ಲೇಖನವನ್ನು ಬರೆಯಬೇಕು. ಪ್ರಚಲಿತ ವಿದ್ಯಮಾನಗಳ ಬಗೆಗೆ ಬರೆಯಬಲ್ಲ ಲೇಖಕನ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ ಮಾತನಾಡಿ ಪತ್ರಿಕೋದ್ಯಮವು ಸರಕಾರದ ನಾಲ್ಕು ಅಂಗಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ಪತ್ರಿಕೋದ್ಯಮವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಸಮಾಜದ ಅವಶ್ಯಕತೆಗಳನ್ನು ವರದಿಗಾರರು ತೋರಿಸಿಕೊಡಬೇಕು. ಇದರಿಂದ ಜನತೆಯ ಸಮಸ್ಯೆಗಳ ಮಾಹಿತಿ ನೀಡಿದಂತಾಗುವುದು. ವರದಿಗಳು ಜನರ ನೋವಿಗೆ ಸ್ಪಂದಿಸುವಂತಿರಬೇಕು. ಸಮಾಜಕ್ಕೆ ಪತ್ರಿಕೆಗಳು ದಾರಿದೀಪವಾಗಬೇಕು ಎಂದು ನುಡಿದರು.
ವಿವೇಕಾನಂದ ಕಾಲೇಜಿನ ಸಂಚಾಲಕೆಂ.ಟಿ ಜಯರಾಮ ಭಟ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಪತ್ರಿಕೋದ್ಯಮ ವಿಭಾಗ ಉಪನ್ಯಾಸಕಿ ಭವ್ಯಾ.ಪಿ.ಆರ್.ನಿಡ್ಪಳ್ಳಿ ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು. ಕನ್ನಡ ವಿಭಾಗ ಉಪನ್ಯಾಸಕ ಡಾ. ಮನಮೋಹನ ಎಂ ನಿರ್ವಹಿಸಿದರು.