ವಿವೇಕಾನಂದ ಎಂ.ಕಾಂ ವಿಭಾಗದಲ್ಲಿ ಉಪನ್ಯಾಸ ಕಾರ್ಯಕ್ರಮ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಎಂ.ಕಾಂ ವಿಭಾಗ ಹಾಗೂ ಐಸಿಐಸಿಐ ಪ್ರೊಡೆನ್ಶಿಯಲ್ ಸಹಯೋಗದೊಂದಿಗೆ ಬಂಡವಾಳ ಹೂಡಿಕೆ ವಿಷಯವಾಗಿ ಉಪನ್ಯಾಸ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ವಿ ರಘುನಂದನ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಬುಧವಾರ ಮಾಹಿತಿ ನೀಡಿದರು.
ಹೂಡಿಕೆ ಕ್ಷೇತ್ರದಲ್ಲಿ ಅಪಾಯವೂ ಹೆಚ್ಚು, ಅವಕಾಶವೂ ಹೆಚ್ಚು. ಯಾಕೆಂದರೆ ಈ ವ್ಯವಹಾರದಲ್ಲಿ ಏರು ಪೇರು ಸಾಮಾನ್ಯ. ಸರಿಯಾಗಿ ಬುದ್ಧಿವಂತಿಕೆಯಿಂದ ಹೂಡಿಕೆ ನಡೆಸಿದಲ್ಲಿ ಮಾತ್ರ ಲಾಭ ಗಳಿಸಬಹುದು. ಕಂಪೆನಿಯ ಮಾರುಕಟ್ಟೆ ಬೆಲೆಯನ್ನು ಗಮನಿಸಿ ದೀರ್ಘಕಾಲಿಕವಾಗಿ ಹಣ ಹೂಡಿದರೆ ಮಾತ್ರ ಹೆಚ್ಚಿನ ಪ್ರಯೋಜನ ಕಾಣಬಹುದು ಎಂದು ನುಡಿದರು.
ವಿದ್ಯಾರ್ಥಿಗಳು ಹೂಡಿಕೆ ಕ್ಷೇತ್ರದ ಬಗೆಗೆ ಸಾಕಷ್ಟು ಜ್ಞಾನವನ್ನು ಪಡೆಯಬೇಕು ಎಂದರಲ್ಲದೆ ಹೂಡಿಕೆ ಕ್ಷೇತ್ರದಲ್ಲಿ ಎಚ್ಚರಿಕೆಯ ನಡೆ ಅತ್ಯಂತ ಅಗತ್ಯ. ಬ್ರೋಕರ್‌ಗಳನ್ನು ನಿಗದಿಪಡಿಸುವಾಗಲೂ ಎಚ್ಚರಿಕೆಯಿಂದಿರಬೇಕು. ಮಾರುಕಟ್ಟೆಯನ್ನು ತುಲನೆ ಮಾಡಿ ಹೂಡಿಕೆ ಮಾಡಿದರೆ ಮಾತ್ರ ಉತ್ತಮ ಮೊತ್ತವನ್ನು ಹಿಂದಿರುಗಿ ಪಡೆಯಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಎಂ.ಕಾಂ. ವಿಭಾಗದ ಮುಖ್ಯಸ್ಥೆ ವಿಜಯ ಸರಸ್ವತಿ ಉಪಸ್ಥಿತರಿದ್ದರು. ಎಂ.ಕಾಂ.ವಿದ್ಯಾರ್ಥಿನಿಯರಾದ ವಿಜಯಶ್ರೀ ಪ್ರಾರ್ಥಿಸಿ, ಅಶ್ವಿನಿ ಸ್ವಾಗತಿಸಿದರು. ವಿದ್ಯಾಥಿನಿ ಅಂಬಿಕಾ ಕಾರ್ಯಕ್ರಮ ನಿರ್ವಹಿಸಿದರು.