ವಿವೇಕಾನಂದ ಕಾಲೇಜಿನಲ್ಲಿ ಪಿಜಿಸಿಇಟಿ ತರಗತಿಗಳ ಉದ್ಘಾಟನೆ
ಪುತ್ತೂರು: ಆಧುನಿಕ ಜಗತ್ತು ಯಂತ್ರಮಯವಾಗುತ್ತಿದೆ. ನಾವು ಆಯ್ಕೆ ಮಾಡಿಕೊಳ್ಳುವಂತಹ ಕಾಲೇಜು ನಮ್ಮ ಕೌಶಲ್ಯಗಳನ್ನು ಅಭಿವೃದ್ಧಿ ಮಾಡಲು ಸಹಾಯಕವಾಗಿದೆಯೇ ಎಂಬುದು ನಮ್ಮ ಗಮನದಲ್ಲಿ ಇರಬೇಕು. ಪಿಜಿಸಿಇಟಿ ಅನ್ನೋದು ನಮ್ಮ ಶೈಕ್ಷಣಿಕ ಜೀವನದ ಒಂದು ಮಹತ್ತರ ಮೆಟ್ಟಿಲಾಗಿದ್ದು, ಇದರಿಂದ ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಳಹದಿ ಆಗುವುದು. ಪಿಜಿಸಿಇಟಿ ಅನ್ನುವುದು ನಮಗೆ ದೃಢತೆ ಮತ್ತು ಅರ್ಹತೆಯನ್ನು ನೀಡುವುದು ಎಂದು ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿ ಕೃತನ್ ಬಿ.ಕೆ. ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ, ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ವ್ಯವಹಾರ ಆಡಳಿತ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ ಪಿಜಿಸಿಇಟಿ ಎಂ.ಬಿ.ಎ. ಕೋಚಿಂಗ್ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ವಹಿಸಿದ್ದರು. ಈ ಸಂದರ್ಭ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭೌತಶಾಸ್ತ್ರ ಉಪನ್ಯಾಸಕ ಡಾ. ಶ್ರೀಶ ಭಟ್ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಮುಕುಂದ ಕೃಷ್ಣ ವಂದಿಸಿದರು. ತೃತೀಯ ಬಿಕಾಂ ವಿದ್ಯಾರ್ಥಿನಿ ಪಲ್ಲವಿ ನಿರೂಪಿಸಿದರು.