VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ಕಾಲೇಜಿನಲ್ಲಿ ಸಪ್ತಪರ್ಣೋತ್ಸವ ದಿನ – ಸಾಧನೆಯನ್ನು ಸೇವೆಗೋಸ್ಕರ ಬಳಸಿ: ಡಾ. ಕೃಷ್ಣ ಭಟ್

ಪುತ್ತೂರು: ಪ್ರತಿಭೆ ಪ್ರತಿಯೊಬ್ಬರಲ್ಲೂ ಇದೆ. ಹೆಚ್ಚಿನವರು ಅವರವರ ಆಸಕ್ತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಇಂದು ಪ್ರತಿಭಾವಂತರು ಮಾಡಿದ ಸಾಧನೆಯಿಂದ ಸಮಾಜಕ್ಕೆ ಪ್ರಯೋಜನವೇನು ಎಂಬುದನ್ನು ವಿಮರ್ಶಿಸಬೇಕಿದೆ. ಸಾಧಕ ತನ್ನ ಸಾಧನೆಯನ್ನು ಸೇವೆಗೋಸ್ಕರ, ಸಮಾಜದ ಏಳಿಗೆಗಾಗಿ ಉಪಯೋಗಿಸಿದರೆ ಜೀವನದಲ್ಲಿ ಸಾರ್ಥಖ್ಯವನ್ನು ಪಡೆಯಬಹುದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರ ನಡೆದ ಸಪ್ತಪರ್ಣೋತ್ಸವ ದಿನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

 

ಮಂಗಳೂರಿನ ಹರೇಕಳ ಹಾಜಬ್ಬರ ಸಾಧನೆಗೆ ದಕ್ಕಿದ ಸಮ್ಮಾನ, ಪ್ರಶಸ್ತಿ ಕೇವಲ ಅವರ ಪ್ರತಿಭೆಗೆ ದಕ್ಕಿದ್ದಲ್ಲ. ಸಮಾಜದ ಅಭಿವೃದ್ಧಿಗಾಗಿ ಅವರು ನೀಡಿದ ನಿಶ್ಕಲ್ಮಶ ಸೇವೆಗೆ ದೊರೆತ ಪುರಸ್ಕಾರ. ಪ್ರತಿಯೊಬ್ಬ ಸಾಧಕನು ಸಮಾಜಕ್ಕೆ ಸೇವೆಯನ್ನು ನೀಡಬೇಕು ಎಂದರು ಅಲ್ಲದೆ, ಕೇವಲ ಆರ್ಥಿಕವಾಗಿ ಬಲಿಷ್ಟವಾಗಿದ್ದರೆ ಸಮಾಜ ಸೇವೆಯನ್ನು ಮಾಡಬಹುದು ಎಂದು ಹಲವರು ಹೇಳುತ್ತಾರೆ. ಆದರೆ ಇದೆಲ್ಲಕ್ಕಿಂತ ಮಿಗಿಲಾದದ್ದು ಸೇವಾ ಮನೋಭಾವ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳೀಕೃಷ್ಣ ಕೆ.ಎನ್. ಚಳ್ಳಂಗಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸೃಜಶೀಲತೆಯನ್ನು ತರುವ ನಿಟ್ಟಿನಲ್ಲಿ ಇಂದು ಸಪ್ತಪರ್ಣೋತ್ಸವ ಕಾರ್ಯಕ್ರಮ ಮುನ್ನುಡಿ ಬರೆದಿದೆ. ವಿದ್ಯಾರ್ಥಿಗಳು ತಮ್ಮಲ್ಲಿ ಸೃಜನಶೀಲತೆಯ ಜೊತೆಗೆ ವಿಶೇಷತೆಯನ್ನು ರೂಢಿಸಿಕೊಳ್ಳಬೇಕು. ಮುಂದೆ ತರಗತಿಯ ಒಳಗೂ ಸೃಜನಶೀಲತೆ, ವಿಶೇಷತೆಯನ್ನು ತರುವ ಮೂಲಕ ಗುರುತಿಸಿಕೊಳ್ಳಬೇಕು ಎಂದರು.

ಬಹುಮಾನ ವಿತರಣೆ

ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳ ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಸುಪ್ರಭಾ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮೀ ವಿ. ಭಟ್, ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.

ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲಕ ಪ್ರೊ. ಕೃಷ್ಣ ಕಾರಂತ ಕೆ., ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಲಿಖಿತಾ ವಿ.ಕೆ. ಉಪಸ್ಥಿತರಿದ್ದರು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ರಶ್ಮಿ, ಅನುಷಾ ಸಿ.ಎಚ್. ಪ್ರಾರ್ಥಿಸಿದರು. ಪ್ರಾಚಾರ್ಯ ಪ್ರೊ. ವಿ.ಜಿ. ಭಟ್ ಸ್ವಾಗತಿಸಿದರು, ಸಂಸ್ಕೃತ ಉಪನ್ಯಾಸಕ ಡಾ. ಶ್ರೀಶ ಕುಮಾರ್ ಪ್ರಸ್ತಾವನೆಗೈದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಿಶಾಂತ್ ವಿದ್ಯಾರ್ಥಿ ಸಂಘದ ವರದಿವಾಚಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ವಸ್ತಿಕ್ ಕೆ.ಆರ್. ವಂದಿಸಿದರು. ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ. ವಿಜಯಸರಸ್ವತಿ ಬಿ. ಕಾರ್ಯಕ್ರಮ ನಿರೂಪಿಸಿದರು.