ವಿವೇಕಾನಂದ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರ ಉದ್ಘಾಟನೆ
ಪುತ್ತೂರು:ವಿವೇಕಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಇಲ್ಲಿನ ಕೊಡಿಪ್ಪಾಡಿ ಗ್ರಾಮದ ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡಿತು. ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಘೋಷಣೆಯಡಿ ಆರಂಭಗೊಂಡ ಈ ಶಿಬಿರವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಉದ್ಘಾಟಿಸಿದರು.
ಭಾರತವು ಕೃಷಿ ಪ್ರಧಾನ ದೇಶ. ಆದಾಗ್ಯೂ ಈ ದಿನಗಳಲ್ಲಿ ಜನ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಹೀಗಿರುವಾಗ ವಿದ್ಯಾರ್ಥಿಗಳು ಹಳ್ಳಿಯೊಂದರ ಶಾಲೆಯಲ್ಲಿ ವಾರಪೂರ್ತಿ ಸಮಯ ವಿನಿಯೋಗಿಸಲು ಆಸಕ್ತಿ ವಹಿಸಿರುವುದು ಸ್ವಾಗತಾರ್ಹ. ಇಂತಹ ಮತ್ತಷ್ಟು ಪ್ರಯತ್ನಗಳು ಸಮಾಜದೆಲ್ಲೆಡೆ ನಡೆಯಬೇಕು ಎಂದು ಡಾ.ಕೃಷ್ಣ ಭಟ್ ಹೇಳಿದರು.
ಕುಡಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್, ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕುಡಿಪ್ಪಾಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರಿಧರ ಗೋಮುಖ, ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ಎನ್, ಎನ್.ಎಸ್.ಎಸ್ ಶಿಬಿರಾಧಿಕಾರಿಗಳಾದ ಡಾ.ರೋಹಿಣಾಕ್ಷ ಶಿರ್ಲಾಲು, ವಿದ್ಯಾ ಎಸ್, ಡಾ.ಅರುಣ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿದೇಶನದಲ್ಲಿ ಕುಡಿಪ್ಪಾಡಿ ಗ್ರಾಮವನ್ನು ವಿವೇಕಾನಂದ ಕಾಲೇಜು ದತ್ತು ತೆಗೆದುಕೊಂಡಿರುವುದು ಹಾಗೂ ಈಗಾಗಲೇ ಈ ಗ್ರಾಮದಲ್ಲಿ ನಾನಾ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಿರುವುದು ಗಮನಾರ್ಹ.