ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ
ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ೨೦೧೬-೧೭ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಬುಧವಾರ ಕಾಲೇಜಿನಲ್ಲಿ ನಡೆಯಿತು. ಅಧ್ಯಕ್ಷರಾಗಿ ಅಂತಿಮ ಬಿ.ಕಾಂ ಎ ವಿಭಾಗದ ಸುಹಾಸ್ ವಿ ಶೆಟ್ಟಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎ.ಯ ಶ್ರೇಯಸ್ ಕೆ ಹಾಗೂ ಜತೆ ಕಾರ್ಯದರ್ಶಿಯಾಗಿ ಅಂತಿಮ ಬಿ.ಎಸ್ಸಿಯ ದೀನವಿ ಎಂ.ಜಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ವಿದ್ಯಾರ್ಥಿ ನಾಯಕರಾದವರು ಕಾಲೇಜಿನ ಘನತೆಯನ್ನು ಹೆಚ್ಚಿಸುವಂತಹ ಕಾರ್ಯಗಳನ್ನು ಮಾಡಬೇಕು. ವಿವೇಕಾನಂದ ಕಾಲೇಜು ಸೆಂಟರ್ ಆಫ್ ಪೊಟೆನ್ಶಿಯಲ್ ಫಾರ್ ಎಕ್ಸಲೆನ್ಸ್ ಅನ್ನುವ ವಿಶಿಷ್ಟ ಸ್ಥಾನಮಾಕ್ಕೆ ಪಾತ್ರವಾಗುವುದರ ಮೂಲಕ ರಾಷ್ಟ್ರ ಮಟ್ಟದಲ್ಲೇ ಗುರುತಿಸಿಕೊಂಡಿದೆ. ಅಂತಹ ಸ್ಥಾನಮಾಕ್ಕೆ ಅರ್ಹವಾದ ರೀತಿಯಲ್ಲಿ ವಿದ್ಯಾರ್ಥಿಗಳ ನಡವಳಿಕೆಯೂ ಇರಬೇಕು ಎಂದರು.
ಹಣದಿಂದ ಎಲ್ಲವನ್ನೂ ಕೊಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ. ನೈತಿಕತೆ, ನಂಬಿಕೆ, ನಡವಳಿಕೆ, ವ್ಯಕ್ತಿತ್ವ ಇವೇ ಮೊದಲಾದ ಸಂಗತಿಗಳನ್ನು ನಾವೇ ರೂಢಿಸಿಕೊಳ್ಳಬೇಕು. ಜಗತ್ತು ಮನುಷ್ಯನನ್ನು ಗೌರವಿಸುವುದು ಇವೇ ಸಂಗತಿಗಳ ಆಧಾರದ ಮೇಲೆ ಎಂಬುದನ್ನು ಮರೆಯಬಾರದು. ಆದ್ದರಿಂದ ತಮ್ಮ ತಮ್ಮ ಕರ್ತವ್ಯವನ್ನು ಅರಿತು ವಿದ್ಯಾರ್ಥಿ ನಾಯಕರು ಕೆಲಸ ಮಾಡಬೇಕು. ಪ್ರತಿಯೊಂದನ್ನೂ ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಪ್ರೊ.ಕೃಷ್ಣ ಕಾರಂತ, ಕ್ಯಾ.ಡಿ.ಮಹೇಶ್ ರೈ, ರೇಖಾ, ಹರಿಣಿ ಪುತ್ತೂರಾಯ, ಅನಿತಾ ಕಾಮತ್ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವರ್ಗದವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.