ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳಿಂದ ಕುಡಿಪಾಡಿ ಗ್ರಾಮಕ್ಕೆ ಬೃಹತ್ ಜಾಥಾ- ವಿದ್ಯಾರ್ಥಿಗಳು ಮತ್ತು ಗ್ರಾಮದ ಬೆಸುಗೆ ಅಗತ್ಯ : ಬಲರಾಮ ಆಚಾರ್ಯ
ಪುತ್ತೂರು: ದಿನನಿತ್ಯ ವಿದ್ಯಾಭ್ಯಾಸ, ಪರೀಕ್ಷೆ, ಪಠ್ಯ ಸಂಬಂಧಿ ವಿವಿಧ ಚಟುವಟಿಕೆಗಳಲ್ಲಿ ಮಗ್ನರಾಗುವ ವಿದ್ಯಾರ್ಥಿಗಳು ಬಾಹ್ಯ ಜಗತ್ತಿಗೂ ತಮ್ಮನ್ನು ತಾವು ತೆರೆದುಕೊಳ್ಳುವುದು ಅಗತ್ಯ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಗ್ರಾಮಗಳನ್ನು ಸಂದರ್ಶಿಸುವುದು, ಅಲ್ಲಿಯ ಅರಿವನ್ನು ಹೊಂದುವುದು ಅತ್ಯಂತ ಸ್ವಾಗತಾರ್ಹ ಸಂಗತಿ. ವಿದ್ಯಾರ್ಥಿಗಳು ಅನುಭವ ಶ್ರೀಮಂತರಾಗುವುದಕ್ಕೆ ಸದಾ ಕಾರ್ಯಪ್ರವೃತ್ತರಾಗಬೇಕು ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಲರಾಮ ಆಚಾರ್ಯ ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ವಿವೇಕಾನಂದ ಕಾಲೇಜು ದತ್ತು ಸ್ವೀಕರಿಸಿರುವ ಕುಡಿಪಾಡಿ ಗ್ರಾಮದೆಡೆಗೆ ವಿದ್ಯಾರ್ಥಿಗಳ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ಗ್ರಾಮದೊಂದಿಗೆ ವಿದ್ಯಾರ್ಥಿಗಳ ಬೆಸುಗೆ ಅತ್ಯಂತ ಅಗತ್ಯ. ಅಲ್ಲಿನ ಆಗು ಹೋಗುಗಳ ಬಗೆಗೆ ವಿದ್ಯಾರ್ಥಿಗಳು ಸ್ಪಂದಿಸಲು ಆರಂಭಿಸಬೇಕು. ಗ್ರಾಮ ಮಟ್ಟದಲ್ಲಿ ಆರೋಗ್ಯ ಶಿಬಿರ, ರಕ್ತದಾನ, ಬ್ಯಾಂಕಿಂಗ್ ಮಾಹಿತಿ, ವೃಕ್ಷ ಜಾಗೃತಿ, ಸ್ವಚ್ಛತೆಯ ಅರಿವು ಮೊದಲಾದವುಗಳನ್ನು ಹಮ್ಮಿಕೊಳ್ಳುವುದರಿಂದ ಗ್ರಾಮಾಭಿವೃದ್ಧಿ ಸಾಧ್ಯ. ಈ ರೀತಿ ವಿದ್ಯಾಥಿಗು ಗ್ರಾಮಾಭಿವೃದ್ಧಿಗೆ ಕೈ ಜೋಡಿಸಿದಲ್ಲಿ ಗ್ರಾಮಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಇಬ್ಬರಿಗೂ ಪ್ರಯೋಜನವಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ವಿವೇಕಾನಂದ ಕಾಲೇಜಿನ ವತಿಯಿಂದ ಕುಡಿಪಾಡಿ ಗ್ರಾಮವನ್ನು ದತ್ತು ಸ್ವೀಕರಿಸಿದ ಸಂದರ್ಭದಲ್ಲಿ ಆ ಗ್ರಾಮದವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅತ್ಯಂತ ಹೆಚ್ಚಿನ ಪ್ರೇರಣೆಯನ್ನು ನೀಡಿದೆ. ಭಾರತದ ಅಭಿವೃದ್ಧಿ ಹಳ್ಳಿಗಳ ಅಭಿವೃದ್ಧಿಯಲ್ಲಿ ಅಡಗಿದೆ ಎಂಬ ಸತ್ಯವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಕುಡಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಸುಬ್ರಹ್ಮಣ್ಯ ಗೌಡ, ಗ್ರಾಮ ಸಮಿತಿ ಅಧ್ಯಕ್ಷ ಸುಕುಮಾರ, ಉಪಾಧ್ಯಕ್ಷ ರಾಮ ಜೋಯಿಸ್, ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಕೋಶಾಧಿಕಾರಿ ಗಿರಿಧರ ಗೌಡ ಗೋಮುಖ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ಕೃಷ್ಣ ಕಾರಂತ, ವಿದ್ಯಾರ್ಥಿ ಸಂಘದ ನಾಯಕರುಗಳಾದ ಸುಹಾಸ್ ಶೆಟ್ಟಿ, ಶ್ರೇಯಸ್ ಹಾಗೂ ದೀನವಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಗ್ರಾಮ ವಿಕಾಸ ಸಮಿತಿಯ ಶಿಕ್ಷಕ ಸಂಯೋಜಕರುಗಳಾದ ಡಾ. ಶ್ರೀಶಕುಮಾರ್ ವಂದಿಸಿ, ಡಾ.ರೋಹಿಣಾಕ್ಷ ಕಾರ್ಯಕ್ರಮ ನಿರ್ವಹಿಸಿದರು.