ವಿವೇಕಾನಂದ ಪದವಿ ಕಾಲೇಜಿನಲ್ಲಿ ವಾರ್ಷಿಕೋತ್ಸವ – ಯುವಕರ ದೃಷ್ಠಿ ರಾಷ್ಟ್ರೀಯತೆಯೆಡೆಗಿರಲಿ: ಡಾ. ಕಲ್ಲಡ್ಕ ಪ್ರಭಾಕರ ಭಟ್
ಪುತ್ತೂರು: ಯುವಕರು ಪ್ರಸ್ತುತ ದೇಶದಲ್ಲಾಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಭಾರತ ಮುಂದಿನ ಹತ್ತು ವರ್ಷಗಳಾಚೆಗೂ ತನ್ನ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕತೆಯನ್ನು ಉಳಿಸಿಕೊಳ್ಳಬೇಕಾದರೆ, ಹಿರಿಯರು ಭಾರತದ ಕುರಿತಾಗಿ ಕಂಡ ಕಲ್ಪನೆಯನ್ನು ಸಾಕಾರಗೊಳಿಸಬೇಕಾದರೆ ಯುವಕರು ದೇಶದ ಕುರಿತು ಗಂಭೀರವಾಗಿ ಚಿಂತಿಸಿ ರಾಷ್ಟ್ರೀಯತೆಯೆಡೆಗೆ ತಮ್ಮ ದೃಷ್ಠಿಯನ್ನು ಬದಲಿಸಬೇಕಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.
ನಾವೆಲ್ಲರು ದೇಶದ ಮಕ್ಕಳು. ನಾಣ್ಯದ ಎರಡು ಮುಖವಿದ್ದಂತೆ ಪ್ರತಿಯೊಬ್ಬರೂ ವ್ಯಕ್ತಿಗತವಾಗಿ ಒಂದು ಮುಖವನ್ನು ಹೊಂದಿದ್ದರೆ, ಎರಡನೆಯ ಮುಖವಾಗಿ ರಾಷ್ಟ್ರೀಯತೆಯನ್ನು ಎಲ್ಲರೂ ಹೊಂದಬೇಕು. ನಾಣ್ಯದ ಯಾವುದೇ ಮುಖ ಮಾಸಿದರೂ ಚಲಾವಣೆಯಾಗದು. ಹಾಗಾಗಿ ವ್ಯಕ್ತಿಗತದೊಂದಿಗೆ ರಾಷ್ಟ್ರೀಯತೆಯನ್ನು ಮೈಗೂಢಿಸಿಕೊಂಡು, ಪ್ರತಿಯೊಬ್ಬ ವಿದ್ಯಾರ್ಥಿಗಳು ದೇಶದ ಬಗ್ಗೆ ಯೋಚಿಸಿದರೆ ಭಾರತವನ್ನು ಜಗತ್ತಿನ ಸರ್ವಶ್ರೇಷ್ಠ ದೇಶವನ್ನಾಗಿ ಗುರುತಿಸಲು ಸಾಧ್ಯ ಎಂದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ, ಯುವ ಸಮುದಾಯ ಅಂತರ್ಜಾಲ, ಸಾಮಾಜಿಕ ಜಾಲತಾಣಗಳಂತಹ ಆಧುನಿಕ ತಂತ್ರಜ್ಞಾನಗಳ ಆಮಿಷಕ್ಕೆ ಬಲಿಯಾಗಬಾರದು. ಇಂದಿನ ಆದ್ಯತೆಗಳನ್ನು ಅರಿತುಕೊಂಡು ಅವ್ಯಾಹತವಾದ ಮನಸ್ಸಿನ ತುಡಿತಗಳಿಗೆ ಕಡಿವಾಣವನ್ನು ಹಾಕಿಕೊಂಡು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಏಕಾಗ್ರತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಬಂದೊದಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಯಾವುದೇ ಕೆಲಸದ ಹಿಂದೆ ಏಕಾಗ್ರತೆ ಮುಖ್ಯ. ಏಕಾಗ್ರತೆ ಇಲ್ಲದೆ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ನಾವು ಪಡೆದ ಶಿಕ್ಷಣವನ್ನು ಸ್ವಾರ್ಥಕ್ಕಾಗಿ ಬಳಸದೆ ಸಮಾಜದ ಏಳಿಗೆಗಾಗಿ ಉಪಯೋಗಿಸಬೇಕು. ಶಿಕ್ಷಣ ಎಂಬುದು ಸ್ಪಂದನೆಯಾಗಿದೆ. ಈ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕು ಮಾತ್ರವಲ್ಲದೆ, ಅವಕಾಶಗಳನ್ನು ಸ್ವಾರ್ಥಕ್ಕೆ ಬಳಕೆ ಮಾಡದೆ ಸಮಾಜಕ್ಕೆ ಪ್ರತಿಫಲ ಸಿಗುವಂತೆ ಬಳಸಿಕೊಳ್ಳಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಮಾತನಾಡಿ, ಕಾಲೇಜು ವಾರ್ಷಿಕೋತ್ಸವ ಎಂಬುದು ಸಿಂವಾಹಲೋಕನ ಮಾಡುವ ಸಂದರ್ಭ. ಸಾಧನೆಗೈದವರನ್ನು ಗೌರವಿಸುವ ಮೂಲಕ ಇತರ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಹೊರಗೆಡವಲು ಸ್ಫೂರ್ತಿ ನೀಡಲಾಗುತ್ತದೆ. ಸಾಧಕರ ಸಾಧನೆಗಳು ಇನ್ನುಳಿದವರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಜನಾರ್ದನ ಭಟ್ ಎಸ್., ಸದಸ್ಯೆ ಶೋಭಾ ಕೊಳತ್ತಾಯ ಎನ್., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಿವರಾಮ ಭಟ್, ವಿದ್ಯಾರ್ಥಿ ಕ್ಷೇಮ ಪಾಲಕ ಪ್ರೊ. ಕೃಷ್ಣ ಕಾರಂತ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ವಸ್ತಿಕ್ ಕೆ.ಆರ್., ಕಾರ್ಯದರ್ಶಿ ನಿಶಾಂತ್, ಮತ್ತಿತರರು ಉಪಸ್ಥಿತರಿದ್ದರು.
ಬಹುಮಾನ ವಿತರಣೆ
ಬಿಎಸ್ಸಿಯಲ್ಲಿ ೨ನೇ ರ್‍ಯಾಂಕ್ ಪಡೆದ ರೂಪಶ್ರೀ, ಬಿಝಡ್‌ಸಿಯಲ್ಲಿ ೭ನೇ ರ್‍ಯಾಂಕ್ ಪಡೆದ ಮನ್ವಿತಾ ಕೆ., ಎಂಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ ೨ನೇ ರ್‍ಯಾಂಕ್ ಪಡೆದ ಪಲ್ಲವಿ ಕೆ. ಅವರ ಶೈಕ್ಷಣಿಕ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ದೆಹಲಿಯ ಆರ್‌ಡಿ ಪೆರೇಡದನಲ್ಲಿ ಭಾಗವಹಿಸಿದ ಎನ್‌ಸಿಸಿ ಕೆಡೆಟ್‌ಗಳಾದ ಜೂನಿಯರ್ ಅಂಡರ್ ಆಫೀಸರ್ ಪ್ರಿಯಾ ಡಿ., ಸಾರ್ಜಂಟ್ ಅಂಕಿತಾ ಪಿ., ಯೋಗ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದ ಕಾರ್ತಿಕ್ ಬಿ. ಅವರನ್ನು ಸನ್ಮಾನಿಸಲಾಯಿತು. ಸ್ನಾತಕೋತ್ತರ ಪದವಿಯಲ್ಲಿ ರ್‍ಯಾಂಕ್ ಪಡೆದು ಸಾಧನೆ ಮಾಡಿದ ಸಾಧಕರಾದ ಪಲ್ಲವಿ ಭಟ್ ಎ., ಶೋಭಿತಾ, ಶ್ರೀವಿದ್ಯಾ, ಆದಿತ್ಯಕೃಷ್ಣ, ಶ್ರೀವತ್ಸ, ನವ್ಯಭಟ್, ಶರಧಿ ಎಂ., ಅಪರ್ಣ ಅವರನ್ನು ಗೌರವಿಸಲಾಯಿತು. ಕ್ರೀಡಾ ಸಾಧಕರಾದ ಅಜಿತ್, ಶ್ರೀರಾಮ್, ಹಿಮಾ, ರಕ್ಷಿತಾ, ವೈಷ್ಣವಿ, ರಚನಾ, ನೇಹಾ, ಸ್ವಾತಿ, ಅವರನ್ನು ಗೌರವಿಸಲಾಯಿತು. ವಿವೇಕಾನಂದ ಜಯಂತಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ದತ್ತಿ ನಿಧಿ ಬಹುಮಾನ ವಿತರಣೆ ನಡೆಯಿತು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳೀಕೃಷ್ಣ ಕೆ.ಎನ್. ಚಳ್ಳಂಗಾರು ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ವಾಣಿಜ್ಯ ಉಪನ್ಯಾಸಕಿ ರೇಖಾ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್., ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ. ಶಿವಪ್ರಸಾದ್, ಸ್ನಾತಕೋತ್ತರ ವಿಭಾಗಗಳ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯಸರಸ್ವತಿ ಬಿ. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅರ್ಥಶಾಸ್ತ್ರ ಉಪನ್ಯಾಸಕಿ ಡಾ. ಮಲ್ಲಿಕಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಲಿಖಿತಾ ವಿ.ಕೆ. ವಂದಿಸಿದರು. ಸಂಸ್ಕೃತ ಉಪನ್ಯಾಸಕ ಡಾ. ಶ್ರೀಶಕುಮಾರ್ ಕಾರ್ಯಕ್ರಮ ನಿರೂಪಿಸಿದರು.