ವೃತ್ತಿಯೊಂದಿಗೆ ಪ್ರವೃತ್ತಿ ಇರಬೇಕು: ನಾರಾಯಣ ಕುಂಬ್ರ
ವಿವೇಕಾನAದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ‘ಜನ-ಮನ’ ಕಾರ್ಯಕ್ರಮ
ಪುತ್ತೂರು ಜೂ.29: ಜೀವನದಲ್ಲಿ ಸಾಧಿಸಿದವರನ್ನು ಗುರುತಿಸುವವರು ಜನ, ಸಾಧಿಸಿದವರನ್ನು ಮೇಲೆತ್ತುವುದು ಪತ್ರಿಕೋದ್ಯಮ. ವೃತ್ತಿಯೊಂದಿಗೆ ಪ್ರವೃತ್ತಿ ಇದ್ದರೆ ಜನಸಾಮಾನ್ಯರ ಮಧ್ಯದಲ್ಲಿ ಗುರುತಿಸಿಕೊಳ್ಳಬಹುದು. ಸಮಾಜ ಸೇವೆ ಮಾಡಲು ಕೈತುಂಬಾ ಹಣದ ಅಗತ್ಯವಿಲ್ಲ ಬದಲಾಗಿ ನಿಷ್ಕಲ್ಮಶ ಮನಸ್ಸಿನ ಅಗತ್ಯವಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಲ್ಯಾಬ್ ಸಹಾಯಕ ನಾರಾಯಣ ಕುಂಬ್ರ ಹೇಳಿದರು.
ವಿವೇಕಾನಂದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಶೈಕ್ಷಣಿಕ ವರ್ಷದ ಮೊದಲ ಜನಮನ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿ ಬುಧವಾರ ಅವರು ಮಾತನಾಡಿದರು.ಪತ್ರಿಕೋದ್ಯಮ ಯಾವಾಗಲೂ ಸತ್ಯದ ಪರವಾಗಿರಬೇಕು ಮತ್ತು ಸಮಾಜದಲ್ಲಿ ಇರುವ ಸಮಸ್ಯೆಗಳನ್ನು ಗುರುತಿಸಿ ಮೇಲೆತ್ತುವ ಪ್ರಯತ್ನ ಮಾಡಬೇಕು. ನಾವು ಬೆಳೆಯುವುದರೊಂದಿಗೆ ಬೇರೆಯವರನ್ನು ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಶ್ರೀಪ್ರಿಯ ಪಿ, ಹವ್ಯಶ್ರೀ, ಭರತ್ ಕೋಲ್ಪೆ, ಭರತ್ ಶೆಟ್ಟಿ ಕುಂದಾಪುರ ಉಪಸ್ಥಿತರಿದ್ದರು.
ಈ ಸಂದರ್ಭ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕಿ ತಾರಾ ಕರುಣ್ ಪ್ರಸ್ತಾವನೆಗೈದರು. ಪ್ರಥಮ ಎಂಸಿಜೆ ವಿದ್ಯಾರ್ಥಿನಿ ದಿವ್ಯಶ್ರೀ ಸ್ವಾಗತಿಸಿ, ಜನಮನ ಕಾರ್ಯಕ್ರಮದ ಕಾರ್ಯದರ್ಶಿ ಜಯಶ್ರೀ ಆರ್ಯಾಪು ವಂದಿಸಿದರು. ದ್ವಿತೀಯ ಎಂಸಿಜೆ ವಿದ್ಯಾರ್ಥಿನಿ ದೀಕ್ಷಿತಾ ಜೇಡರಕೋಡಿ ಕಾರ್ಯಕ್ರಮ ನಿರೂಪಿಸಿದರು.