ವೇದಗಣಿತದಿಂದ ಬುದ್ಧಿ ಚುರುಕಾಗುತ್ತದೆ : ಪ್ರೊ.ಕೃಷ್ಣ ಪ್ರಸಾದ್
ಪುತ್ತೂರು : ವೇದಗಣಿತ ಎಂಬುದು ವೇದಗಳಿಂದ ಪುನರುತ್ಪತ್ತಿಯಾಗಿರುವ ಗಣಿತದ ಸುಲಭ ಸೂತ್ರ. ವೇದ ಗಣಿತದಿಂದ ಗಣಿತದ ಕಠಿಣವಾದ ಸಮೀಕರಣಗಳನ್ನು ಸುಲಭವಾಗಿ ಬಿಡಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡಿಮೆ ಸಮಯದಲ್ಲಿ ಅಧಿಕ ಪ್ರಶ್ನೆಗಳಿಗೆ ಉತ್ತರಿಸಲು ವೇದಗಣಿತದ ಸುಲಭ ಸೂತ್ರಗಳು ಸಹಾಯಕವಾಗುತ್ತವೆ ಎಂದು ಮಂಗಳೂರಿನ ಶ್ರೀನಿವಾಸ ಕಾಲೇಜಿನ ಕಂಪ್ಯೂಟರ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಕೃಷ್ಣ ಪ್ರಸಾದ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಐ.ಟಿ ಕ್ಲಬ್‌ನ ಮತ್ತು ಗಣಿತಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವೇದಗಣಿತದ ಬಳಕೆಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ವೇದಗಣಿತ ಎಂಬುದು ಕೆಲವು ನಿಯಮಗಳ ಗುಂಪಿನ ಹೆಸರಾಗಿದೆ. ಕಡಿಮೆ ಅವಧಿಯಲ್ಲಿ ಬಹಳ ವೇಗವಾಗಿ ಉತ್ತರಿಸಲು ವೇದಗಣಿತದ ಬಳಕೆಯಿಂದ ಸಾಧ್ಯ. ಏಕಾಗ್ರತೆ ಹೆಚ್ಚಿಸುವಲ್ಲಿ ವೇದಗಣಿತವು ಮಹತ್ವದ ಪಾತ್ರವಹಿಸುತ್ತದೆ. ಅಲ್ಲದೇ ವೇದಗಣಿತದ ಅಧ್ಯಯನದಿಂದ ಬುದ್ಧಿ ಚುರುಕಾಗುವುದು. ವೇದಗಣಿತವು ಸಾಂಪ್ರದಾಯಿಕ ಗಣಿತದ ವಿಧಾನಕ್ಕಿಂತ ಭಿನ್ನವಾದುದು. ಗಮನವಿಟ್ಟು ಕಲಿತರೆ ಸುಲಭಗ್ರಾಹ್ಯವಾದ ಗಣಿತವಾಗಿದೆ. ಆಸಕ್ತಿಯಿದ್ದರೆ ಮಾತ್ರ ವೇದಗಣಿತದ ಕಲಿಕೆ ಸಾಧ್ಯ ಎಂದರು.
ವೇದಿಕೆಯಲ್ಲಿ ಐ.ಟಿ ಕ್ಲಬ್‌ನ ಸಂಯೋಜಕ ವಿಕ್ರಮ್.ಕೆ, ಗುರುಕಿರಣ್ ಭಟ್, ಗಣಕ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಕಾಶ್ ಕುಮಾರ್ ಮತ್ತು ಗಣಿತ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೌರ್ಣಮಿ ಸ್ವಾಗತಿಸಿ, ವಿದ್ಯಾರ್ಥಿನಿ ದೀಕ್ಷಾ ಪುರುಷೋತ್ತಮ ನಿರ್ವಹಿಸಿ, ವಂದಿಸಿದರು.