VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವ್ಯಕ್ತಿತ್ವದಲ್ಲಿ ಪರಿಪೂರ್ಣತೆ ಹೊಂದಿದಾಗ ವೃತ್ತಿ ಜೀವನ ಸಮರ್ಪಕ : ಕಿಶನ್ ರಾವ್

ಪುತ್ತೂರು ಜೂ.17: ಸಮಾಜದಲ್ಲಿ ವ್ಯಕ್ತಿ ನಿರ್ಮಾಣಕ್ಕಿಂತ ವ್ಯಕ್ತಿತ್ವ ನಿರ್ಮಾಣ ಮುಖ್ಯ. ನಮ್ಮ ವ್ಯಕ್ತಿತ್ವದಲ್ಲಿ ಪರಿಪೂರ್ಣತೆ ಹೊಂದಿದಾಗ ಮಾತ್ರ ಉದ್ಯೋಗ ಕ್ಷೇತ್ರದಲ್ಲಿ ಸಫಲರಾಗಲು ಸಾಧ್ಯ. ಪ್ರತಿಯೊಂದು ಸಂಸ್ಥೆಯ ಯಶಸ್ಸು ಮತ್ತು ಪಥನ ಅದರ ಮಾನವ ಸಂಪನ್ಮೂಲದ ಮೇಲೆ ಅವಲಂಬಿತಾಗಿರುತ್ತದೆ. ಈ ನಿಟ್ಟಿನಲ್ಲಿ ಒಬ್ಬ ವ್ಯಕ್ತಿ ಉದ್ಯೋಗಿಯಾಗಿ ಸಂಸ್ಥೆಗೆ ಕಾಲಿಟ್ಟಾಗ ಆತನಲ್ಲಿ ಪ್ರಾಮಾಣಿಕತೆ, ಸಮಗ್ರತೆ, ಪಾರದರ್ಶಕತೆ, ಹೊಣೆಗಾರಿಕೆ, ಗೌಪ್ಯತೆ, ಗೌರವ ಹಾಗೂ ವಸ್ತು ನಿಷ್ಠೆಯಂತಹ ಗುಣಗಳನ್ನು ಮೈಗೂಡಿಸಿಗೊಳ್ಳಬೇಕು ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿಶನ್ ರಾವ್ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯುಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ‘ವರ್ಕ್ ಪ್ಲೇಸ್ ಪ್ರೊಫೆಷನಲಿಸಂ’ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಶುಕ್ರವಾರ ಮಾತನಾಡಿದರು.
ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು ಮತ್ತು ಅದಕ್ಕೆ ಬೇಕಾದ ಅಂಶಗಳನ್ನು ಗುರುತಿಸಿಕೊಳ್ಳುವುದು ಅಗತ್ಯ. ಒಬ್ಬ ವ್ಯಕ್ತಿ ಉತ್ತಮ ಉದ್ಯೋಗಿಯಾಗಿ ಹೊರ ಹೊಮ್ಮಲು ಆತನಲ್ಲಿ ಸಂವಹನ ಕೌಶಲ್ಯ ಅತ್ಯಗತ್ಯ. ಹೀಗಾಗಿ ಪ್ರಸ್ತುತ ಪಡಿಸುವ ವಿಷಯದಲ್ಲಿ ಸ್ಪಷ್ಟತೆ ಮತ್ತು ಅದನ್ನು ಯೋಜನೆಗೆ ತರುವ ಸಾಮರ್ಥ್ಯವಿರಬೇಕು. ಒಬ್ಬ ಉದ್ಯೋಗಿಯ ಪ್ರತಿಯೊಂದು ನಿಮಿಷವೂ ಸಂಸ್ಥೆಯ ಗೆಲುವಿಗೆ ಶ್ರಮಿಸುತ್ತದೆ ಹೀಗಾಗಿ ಆತನಲ್ಲಿ ಸಮಯಪ್ರಜ್ಞೆ ಹಾಗೂ ಯಾವುದೇ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವ ಶ್ರದ್ಧೆ ಇರಬೇಕು. ಈ ಮೂಲಕ ಸಂಸ್ಥೆಗೆ ನಿಷ್ಠರಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಗಳಿಸಬೇಕಾದರೆ ಪೂರ್ವತಯಾರಿ ಇರಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಹಂತದಲ್ಲಿ ವೃತ್ತಿಪರತೆಯನ್ನು ಬೆಳೆಸಿಕೊಳ್ಳಲು ತಯಾರಾಗಿರಬೇಕು ಹಾಗೂ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಉದ್ಯೋಗಿಗಳಾಗಲು ವೃತ್ತಿಪರತೆ ಅತ್ಯಗತ್ಯ ಎಂದು ಹೇಳಿದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವಿದ್ಯಾರ್ಥಿನಿ ಕೃತಿ ಸ್ವಾಗತಿಸಿ, ಅನುಶ್ರೀ ಕೆ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಶೋಭಿತ ಕೆ ವಂದಿಸಿ, ರೂಪ ಕೆ ಕಾರ್ಯಕ್ರಮ ನಿರೂಪಿಸಿದರು.