ಸಂಸ್ಕೃತದ ನೀತಿ ಅಳವಡಿಸಿಕೊಳ್ಳಬೇಕು: ಶಂಕರನಾರಾಯಣ ಘನಪಾಠಿ
ಪುತ್ತೂರು: ಸಂಸ್ಕೃತ ಎಲ್ಲಾ ಭಾಷೆಯ ಹಿನ್ನಲೆಯಲ್ಲಿಯೂ ಮಾತೃಸ್ಥಾನದಲ್ಲಿದೆ. ಸಂಸ್ಕೃತದಲ್ಲಿ ಹೇಳಲಾಗಿರುವ ನೀತಿಯನ್ನು ಜೀವನದಲ್ಲಿ ಸ್ವಇಚ್ಛೆಯಿಂದ ಅಳವಡಿಸಿದರೆ ಯಾವುದೇ ರೀತಿಯ ಅನ್ಯಾಯ, ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಭರತನಾಟ್ಯ, ತಾಳ, ಶಿಲ್ಪ ಕಲೆ, ಆಯುರ್ವೇದ ಮೊದಲಾದ ವಿಚಾರಗಳ ಬಗೆಗಿನ ಮೂಲ ಮಾಹಿತಿಗಳು ಸಂಸ್ಕೃತದ ಶ್ಲೋಕಗಳಲ್ಲಿ ಲಭ್ಯವಿದೆ ಎಂದು ಶ್ರೀ ತಿರುಮಲ ತಿರುಪತಿ ದೇವಾಲಯದ ವಿಶ್ರಾಂತ ವೇದಜ್ಞ ಶಂಕರನಾರಾಯಣ ಘನಪಾಠಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮತ್ತು ವಿಕಾಸಂ ಸಂಸ್ಕೃತ ಸಂಘದ ಆಶ್ರಯದಲ್ಲಿ ಸಂಸ್ಕೃತೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ವಿಲ್ಸನ್ ಪ್ರಭಾಕರ್ ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಂಶೋಧನಾ ಯೋಜನೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಮನೋಭಾವವನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಅತೀ ಅವಶ್ಯಕವಾಗಿದೆ. ಐತಿಹ್ಯದ ಕುರಿತಾಗಿ ಸಂಶೋಧನೆ ಮಾಡುವುದರ ಜೊತೆಗೆ ವೈಜ್ಞಾನಿಕ ಕಾರಣವನ್ನು ಸಂಶೋಧನೆ ಮಾಡಬೇಕು. ಇದರಿಂದ ಯೋಜನೆಯ ಗುಣಮಟ್ಟ ಹೆಚ್ಚುತ್ತದೆ ಎಂದು ತಿಳಿಸಿದರು.
ಸಂಸ್ಕೃತೋತ್ಸವದ ಪ್ರಯುಕ್ತ ಸಂಸ್ಕೃತ ಸಂಘ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಶೈಕ್ಷಣಿಕ ವರ್ಷ ಸಂಸ್ಕೃತದಲ್ಲಿ ಅತೀ ಹೆಚ್ಚು ಅಂಕ ಗಳಿಸಿದವರಿಗೆ ಬಹುಮಾನವನ್ನು ವಿತರಿಸಲಾಯಿತು.
ವಿಕಾಸಂ ಸಂಸ್ಕೃತ ಸಂಘದ ಅಧ್ಯಕ್ಷ ಈಶ್ವರ ಶರ್ಮ ಸ್ವಾಗತಿಸಿ, ಕಾರ್ಯದರ್ಶಿ ವಸುಂಧರ ಲಕ್ಷ್ಮೀ ವಂದಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ಶ್ರೀಶ ಕುಮಾರ್ ಎಂ.ಕೆ ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಪದ್ಮಶ್ರೀ ಪ್ರಾರ್ಥಿಸಿದರು.