ಸಮಾಜ ಸೇವೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಿದೆ : ವನಮಾಲಿನಿ
ಪುತ್ತೂರು : ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಗೌರವವಿದೆ. ಮಹಿಳೆಯರ ಕಡೆಗೆ ಪೂಜ್ಯಭಾವವಿದೆ. ಸ್ತ್ರೀಯರ ಸ್ವಾತಂತ್ರ್ಯಕ್ಕೆ ಪ್ರಾಧಾನ್ಯತೆಯಿತ್ತು. ಉನ್ನತ ಸ್ಥಾನಮಾನವೂ ದೊರೆತಿತ್ತು. ಅಂದಿನ ಕಾಲದಲ್ಲೇ ಅನೇಕ ಸಮಾಜಸೇವೆಗಳನ್ನು ಮಾಡಿದವರು ಸ್ತ್ರೀಯರು. ಸಮಾಜಕ್ಕೆ ಕೊಡುಗೆಗಳನ್ನು ನೀಡಿದ ಹಿರಿಮೆ ಮಹಿಳೆಯರದ್ದು ಎಂದು ವಿವೇಕಾನಂದ ಕಾಲೇಜಿನ ಮೊದಲ ಬ್ಯಾಚ್‌ನ ವಿದ್ಯಾರ್ಥಿನಿ ಹಾಗೂ ಸಾಹಿತಿ ವನಮಾಲಿನಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಮಹಿಳಾ ಘಟಕವು ಆಯೋಜಿಸಿದ ಸನ್ಮಾನವನ್ನು ಸ್ವೀಕರಿಸಿ ಸಮಾಜ ಸೇವೆಯಲ್ಲಿ ಮಹಿಳೆಯ ಕೊಡುಗೆ ಎಂಬ ವಿಷಯದ ಬಗ್ಗೆ ಶನಿವಾರ ಮಾತನಾಡಿದರು.
ಮಹಿಳೆಯರಿಗೆ ಸಮಾಜ ಸೇವೆಯಲ್ಲಿ ತೊಡಗಲು ಆರ್ಥಿಕ ಸ್ವಾವಲಂಬನೆಯ ಅಗತ್ಯ. ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ ವಿದ್ಯಾಭ್ಯಾಸದಿಂದ ದೊರೆತಿದೆ. ಅಲ್ಲದೇ ಮಾನಸಿಕ ಧೈರ್‍ಯವಿರಬೇಕು. ಕುಟುಂಬದ ಪ್ರೋತ್ಸಾಹವಿದ್ದರೆ ಧೈರ್‍ಯದಿಂದ ಸಮಾಜ ಸೇವೆ ಮಾಡಲು ಸಾಧ್ಯ. ಎಲ್ಲಕ್ಕಿಂತಲೂ ಮಿಗಿಲಾಗಿ ಮಹಿಳೆಯರಲ್ಲಿ ಒಗ್ಗಟ್ಟಿರಬೇಕು. ಸಮಾಜದ ಬೆಂಬಲವು ಸಾಮಾಜಿಕ ಕಾರ್‍ಯಗಳಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಸಮಾನ ಮನಸ್ಕರು ಒಂದಾಗಿ ಉತ್ತಮ ಕಾರ್ಯಗಳಲ್ಲಿ ತೊಡಗಿದರೆ ಮಾತ್ರ ಸಮಾಜ ಸೇವೆ ಸಾಧ್ಯ ಎಂದು ಕಿವಿ ಮಾತು ಹೇಳಿದರು.
ವನಮಾಲಿನಿ ಅವರ ಬಗೆಗೆ ಅಭಿನಂದನೆಯ ಮಾತುಗಳನ್ನಾಡಿದ ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತಕುಮಾರ್ ವನಮಾಲಿನಿ ಅವರುಸ್ನೇಹಮಯಿ ಮತ್ತು ಸರಳ ಗುಣದವಾರಾಗಿದ್ದಾರೆ. ಉನ್ನತ ಚಿಂತನೆಯನ್ನು ಹೊಂದಿದ್ದರೆ ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಲು ಸಾಧ್ಯ. ಇದನ್ನು ವನಮಾಲಿನಿಯವರಿಂದ ತಿಳಿದುಕೊಳ್ಳಬಹುದು. ಶುಚಿತ್ವವಾದ ನಿರ್ಮಲವಾದ ಗುಣವನ್ನು ಹೊಂದಿದವರು. ಉತ್ತಮ ಅಧ್ಯಾಪಿಕೆಯಾಗಿ ಲೇಖಕಿಯಾಗಿ ಸೇವೆ ಸಲ್ಲಿಸಿದವರು. ಸಮಾಜ ಸೇವೆಗೆ ಮತ್ತೊಂದು ಹೆಸರೇ ವನಮಾಲಿನಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ. ಜಯರಾಮ್ ಭಟ್ ಮಾತನಾಡಿ ಸ್ತ್ರೀಯರು ತಮ್ಮ ರಕ್ಷಣೆಯತ್ತ ಗಮನ ಹರಿಸಬೇಕು. ಸ್ವರಕ್ಷಣೆಯನ್ನು ತಿಳಿದಿರಬೇಕು. ಮಹಿಳೆಯರು ಒಗ್ಗಟ್ಟಿನಿಂದಿದ್ದರೆ ಮಾತ್ರ ಇದು ಸಾಧ್ಯ. ಕುಟುಂಬದ ಸಹಕಾರ ಮಾತ್ರವಲ್ಲದೆ ಸ್ವಾವಲಂಬನೆಯಿದ್ದರೆ ಸ್ತ್ರೀಯರು ಸುರಕ್ಷಿತವಾಗಿರಬಹುದು ಎಂದರು.
ಸಾಹಿತಿ ವನಮಾಲಿನಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಖಿಲಾ ಮತ್ತು ನಿಖಿಲಾ ಪ್ರಾರ್ಥಿಸಿದರು, ಮಹಿಳಾ ಸಂಘದ ಸಂಚಾಲಕಿ ಆಶಾಸಾವಿತ್ರಿ ಸ್ವಾಗತಿಸಿ, ವಾಣಿಜ್ಯ ವಿಭಾಗ ಉಪನ್ಯಾಸಕಿ ವಿದ್ಯಾ.ಕೆ.ಎನ್ ವಂದಿಸಿದರು. ವಾಣಿಜ್ಯ ವಿಭಾಗ ಉಪನ್ಯಾಸಕಿ ಚೈತ್ರಾ ನಿರ್ವಹಿಸಿದರು.