ಸುತ್ತಲಿನ ಅನೇಕ ವಿಷಯಗಳು ಸಂಶೋಧನೆಗೆ ಅರ್ಹ : ಡಾ.ಎಚ್.ಜಿ.ಶ್ರೀಧರ್
ಪುತ್ತೂರು: ಲಿಖಿತ ಸಾಹಿತ್ಯ ಮಾತ್ರವಲ್ಲದೇ ಮೌಖಿಕ ಸಾಹಿತ್ಯವೂ ಸಂಸ್ಕೃತಿಯ ಶೋಧಕ್ಕೆ ಅಗತ್ಯ. ಸಂಸ್ಕೃತಿ ಅಧ್ಯಯನವೆಂದರೆ ಹೊಸದೊಂದು ವಿಚಾರವಲ್ಲ, ಅದು ನಮ್ಮೊಳಗೇ ಬೆರೆತ ಗಮನಾರ್ಹ ಸಂಗತಿಯಾಗಿದ್ದು ಅದನ್ನು ಗುರುತಿಸಬಲ್ಲ ಸಾಮರ್ಥ್ಯ ಮುಖ್ಯ. ಕಾವ್ಯದಲ್ಲಿ ಬರುವ ಅಷ್ಟಾದಶ ವರ್ಣನೆಗಳೂ ಕೂಡ ಸಂಸ್ಕೃತಿಗೆ ಪೂರಕವಾಗಿರುತ್ತದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಚ್.ಜಿ ಶ್ರೀಧರ್ ಹೇಳಿದರು.
ಅವರು ಕಾಲೇಜಿನ ವಿಕಾಸಂ- ಸಂಸ್ಕೃತ ಸಂಘ- ಹಿಂದಿ ಸಂಘ ಮತ್ತು ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಸಾಹಿತ್ಯ ಮತ್ತು ಸಂಸ್ಕೃತಿ ಸಂಶೋಧನೆ ಎಂಬ ವಿಷಯದ ಕುರಿತಾಗಿ ಸೋಮವಾರ ಮಾತನಾಡಿದರು.
ಸಂಸ್ಕೃತಿಯ ಶೋಧನೆಗಾಗಿ ಹಳೆಯ ದಾಖಲೆಗಳನ್ನು ಪುನರ್ ವಿಮರ್ಶಿಸಬೇಕಾಗುತ್ತದೆ. ಸಂಶೋಧಕರಿಗೆ ಆ ಬಗೆಗಿನ ಪೂರ್ವಜ್ಞಾನವಿದ್ದ ಪಕ್ಷದಲ್ಲಿ ಸಂಶೋಧನೆ ಸುಲಭ ಸಾಧ್ಯವಾಗುತ್ತದೆ. ನಮ್ಮ ಸುತ್ತಮುತ್ತಲಿನ ಹಲವಾರು ವಸ್ತು, ವಿಚಾರಗಳು ಸಂಶೋಧನೆಗೆ ವಿಷಯಗಳಾಗಬಲ್ಲವು. ಮಾತ್ರವಲ್ಲದೇ ಈ ವರೆಗೆ ದಾಖಲಿಸದ ಐತಿಹ್ಯಗಳನ್ನು ದಾಖಲಿಸುವುದೂ ಸಂಶೋಧನೆಗೆ ಪೂರಕವಾಗುತ್ತದೆ ಎಂದು ನುಡಿದರು.
ದೇವಾಲಯಗಳು, ಆರಾಧನಾ ಪದ್ಧತಿ, ಜಾತ್ರೆಗಳು, ಕ್ರೀಡೆಗಳು, ಶಿಲ್ಪಗಳು ಯಾವ ರಾಜವಂಶವನ್ನು ಪ್ರತಿನಿಧಿಸುತ್ತವೆ ಎಂಬುದು ಮಾಥ್ರವಲ್ಲದೆ, ಕೃಷಿ, ಉತ್ಸವ, ಸಂತೆಗಳು, ಶತಮಾನದ ಶಾಲೆಗಳೂ ಸಂಶೋಧನೆಗೆ ವಿಷಯಗಳಾಗಬಲ್ಲವು. ಸಂಶೋಧನೆ ಮಾಡುವಾಗ ಪೂರ್ವ ಪೀಠಿಕೆ, ಅಧ್ಯಯನದ ಉದ್ದೇಶ ಮತ್ತು ಪ್ರಾಮುಖ್ಯತೆಗಳನ್ನು ದಾಖಲಿಸಬೇಕಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕನ್ನಡ ಸಂಘದ ಕಾರ್ಯದರ್ಶಿ ಗಿರೀಶ್ ಜೆ.ಎಸ್. ಹಾಗೂ ಸಂಸ್ಕೃತ ಸಂಘದ ಅಧ್ಯಕ್ಷ ಈಶ್ವರ ಶರ್ಮ ಉಪಸ್ಥಿತರಿದ್ದರು. ಸಂಸ್ಕೃತ ಸಂಘದ ಸಂಯೋಜಕ ಡಾ. ಶ್ರೀಶ ಕುಮಾರ್ ಸ್ವಾಗತಿಸಿ, ವಂದಿಸಿದರು.