VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

2022ರಲ್ಲಿ ಭಾರತ ಸೂಪರ್ ಪವರ್ : ಪ್ರೊ.ಸಂತೋಷ್ ರೆಬೆಲ್ಲೋ

ಪುತ್ತೂರು: ೨೦೨೨ರಲ್ಲಿ ಭಾರತದಲ್ಲಿನ ಜನರ ಸರಾಸರಿ ವರ್ಷ ೨೯ ಆಗಿರುತ್ತದೆ. ಅರ್ಥಾತ್ ಅದ್ಭುತ ಯುವ ಸಮಾಜವನ್ನು ನಾವು ಹೊಂದಲಿದ್ದೇವೆ. ಈ ಹಿನ್ನಲೆಯಲ್ಲಿ ಆ ಸಂದರ್ಭಕ್ಕಾಗುವಾಗ ನಮ್ಮ ದೇಶ ಸೂಪರ್ ಪವರ್ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಮಂಗಳೂರಿನ ಸೈಂಟ್ ಅಲೋಷಿಯಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಇನ್ಫಾರ್ಮೇಶನ್ ಟೆಕ್ನಾಲಜಿಯ ಡೀನ್ ಪ್ರೊ.ಸಂತೋಷ್ ರೆಬೆಲ್ಲೋ ಹೇಳಿದರು.

       ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಬಾಗ ಹಾಗೂ ಐಟಿ ಕ್ಲಬ್ ಆಶ್ರಯದಲ್ಲಿ ಬುಧವಾರ ಆಯೋಜಿಸಲಾದ ಟೆಕ್ನೋ ತರಂಗ್ – ೧೪ ಅನ್ನುವ ಐಟಿ ಫೆಸ್ಟ್ ಉದ್ಘಾಟಿಸಿ ಮಾತನಾಡಿದರು.

       ಮುಂದಿನ ಎಂಟು ವರ್ಷಗಳಲ್ಲಿ ನಮ್ಮ ದೇಶದಲ್ಲಿನ ಸುಮಾರು ೬೪ ಶೇಕಡಾ ಮಂದಿ ದುಡಿಯುವ ವರ್ಗದಲ್ಲಿರುತ್ತಾರೆ. ಇದರಿಂದಾಗಿ ರಾಷ್ಟ್ರದ ಆರ್ಥಿಕತೆ ಶೀಘ್ರವಾಗಿ ಏರಿಕೆ ಕಾಣಲಿದೆ. ಆದರೆ ಇದೇ ಸಂದರ್ಭದಲ್ಲಿ ಸವಾಲುಗಳೂ ಹೆಚ್ಚಾಗಲಿವೆ. ಆದ್ದರಿಂದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿನ ಬೇಡಿಕೆಗೆ ಉತ್ತರವಾಗುತ್ತಾ ತಯಾರಾಗಬೇಕು. ಪ್ರತಿಭಾನ್ವಿತ ಮಾತ್ರ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಗಳಿಸಲು ಸಾಧ್ಯ ಎಂದು ನುಡಿದರು.

       ಐಟಿ ಕ್ಷೇತ್ರದಲ್ಲಾದ ಅದ್ಭುತ ಬೆಳವಣಿಗೆ ಸ್ವಾಗತಾರ್ಹವಾದರೂ ಅದರಿಂದಾಗಿ ನಮ್ಮ ಅನೇಕಾನೇಕ ವಿಷಯ ವಿಚಾರಗಳಿಗೆ ಹಾನಿಯಾಗುವ ಸಂಭವವೂ ಇದೆ. ಆದ್ದರಿಂದ ಉಪಯೋಗ ಹಾಗೂ ಅಪಾಯಗಳನ್ನು ಅರಿತೇ ಅಡಿಯಿಡಬೇಕಾದ ಅಗತ್ಯವಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಶಿಕ್ಷಣವೆಂದರೆ ತಲೆಯನ್ನು ತುಂಬಿಸುವುದಲ್ಲ, ಬದಲಾಗಿ ವ್ಯಕ್ತಿಯೋರ್ವನನ್ನು ಉತ್ತಮ ಮನುಷ್ಯನನ್ನಾಗಿ ಪರಿವರ್ತಿಸುವುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಮಾತನಾಡಿ, ಮುಂದಿನ ದಿನಗಳ ಭವಿಷ್ಯ ಭಾರತದ್ದಾಗಿ ಪರಿವರ್ತನೆಗೊಳಲಿದೆ. ಮಾತ್ರವಲ್ಲ ಜಗತ್ತಿಗೇ ಯುವ ಶಕ್ತಿಯನ್ನು ಒದಗಿಸುವ ಬಹುದೊಡ್ಡ ಮೂಲವಾಗಿ ಭಾರತ ಗೋಚರಿಸಲಿದೆ. ಆದರೆ ನಾವು ನಮ್ಮ ಸಾಮರ್ಥ್ಯವನ್ನು ಸ್ಪರ್ಧಾತ್ಮಕತೆಗೆ ಒಡ್ಡಿ ಗೆಲ್ಲಬೇಕಾದ ಅನಿವಾರ್ಯತೆಯಿದೆ. ವಿದ್ಯಾರ್ಥಿಗಳು ಜ್ಞಾನವನ್ನು ಬುದ್ಧಿವಂತಿಕೆಯಾಗಿ ಮಾರ್ಪಾಡು ಮಾಡಿಕೊಳ್ಳಬೇಕು ಎಂದರು.

ವಿದ್ಯಾರ್ಥಿನಿಯರಾದ ನವ್ಯತಾ, ಶ್ರೇಯಾ ಹಾಗೂ ರಮ್ಯಾ ಪ್ರಾರ್ಥಿಸಿದರು. ಐಟಿ ಕ್ಲಬ್‌ನ ಕಾರ್ಯದರ್ಶಿ ನಂದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐಟಿ ಕ್ಲಬ್ ಸಂಚಾಲಕಿ ರಮ್ಯಾ ಕಾಶ್ಯಪ್ ಸ್ವಾಗತಿಸಿದರು. ಐಟಿ ಕ್ಲಬ್‌ನ ಅಧ್ಯಕ್ಷ ಸನತ್ ಕುಮಾರ್ ವೈ.ಎಲ್ ವಂದಿಸಿದರು. ವಿದ್ಯಾರ್ಥಿನಿ ಲಿಖಿತಾ ಕಾರ್ಯಕ್ರಮ ನಿರ್ವಹಿಸಿದರು.