ಆಸಕ್ತಿಯಿಂದ ಮಾಡಿದ ಕೃಷಿ ಮನಸ್ಸಿಗೆ ಖುಷಿ ನೀಡುತ್ತದೆ: ವಿ. ಕೆ. ಶರ್ಮ
ಪುತ್ತೂರು: ಇಂದಿನ ಜಂಜಾಟದ ಬದುಕಿನಲ್ಲಿ ಸ್ವಂತ ಭೂಮಿಯಿದ್ದರೂ ಬೆಳೆ ಬೆಳೆಸದೆ ಮಾರುಕಟ್ಟೆಯಲ್ಲಿ ದೊರೆಯುವ ಕೃಷಿ ಉತ್ಪನ್ನಗಳಿಗೆ ಅವಲಂಬಿತರಾಗಿದ್ದೇವೆ. ಹಾಗಾಗಿ ವಿಷಯುಕ್ತ ಪದಾರ್ಥಗಳನ್ನು ನಮ್ಮ ನಿತ್ಯ ಜೀವನದಲ್ಲಿ ಬಳಸುತ್ತಿದ್ದೇವೆ. ಇದರ ಬದಲು ಮನೆಯಲ್ಲೇ ಬೆಳೆಸಿದ ವಿಷರಹಿತ ಆಹಾರ ಬೆಳೆಗಳನ್ನು ಬಳಸಬೇಕು ಎಂದು ಪ್ರಗತಿಪರ ಕೃಷಿಕ ವಿ. ಕೆ. ಶರ್ಮ ತಿಳಿಸಿದರು.
ಅವರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಶನಿವಾರ ನಡೆದ ಕೃಷಿ-ಖುಷಿ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ಲಾಭವಿದೆ. ಆದರೆ ನಾವು ಲಾಭಕ್ಕೋಸ್ಕರವೇ ಕೃಷಿ ಮಾಡಬಾರದು. ಕೃಷಿಯಲ್ಲಿ ಪಡೆಯುವ ಫಸಲು ನಮ್ಮ ದಿನ ನಿತ್ಯದ ಜೀವನಕ್ಕೆ ಲಾಭದಾಯಕವಾಗಿದೆ. ಅನೇಕರು ಅಧಿಕ ಬೆಳೆ ಬರಬೇಕೆಂದು ವಿಷಯುಕ್ತ ರಾಸಾಯನಿಕಗಳನ್ನು ಸಿಂಪಡಿಸುತ್ತಾರೆ. ಅದರಿಂದ ಮಣ್ಣಿಗೆ ಹಾನಿಯಾಗುತ್ತದೆ. ನಮಗೆ ಕೃಷಿಯಿಂದ ಖುಷಿ ಸಿಗಬೇಕಾದರೆ ಮನಸ್ಸಿಗೆ ಖುಷಿ ಕೊಡುವ ಕೃಷಿ ಕೆಲಸ ಮಾಡಬೇಕು. ಅದರಿಂದ ಬರುವ ಪ್ರತಿಫಲದಿಂದ ನಮಗೆ ಹೇಳಲು ಅಸಾಧ್ಯವಾದ ಸಂತಸ ದೊರೆಯುತ್ತದೆ ಎಂದರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ರಬ್ಬರ್ ಕೃಷಿಯಿಂದ ಲಾಭವಿದೆಯೆಂದು ಅದನ್ನೇ ಬೆಳೆಸಬಾರದು. ಬದಲಾಗಿ ವೈವಿಧ್ಯಮಯ ಬೆಳೆಗಳನ್ನು ಬೆಳೆಸಿದಾಗ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಕೃಷಿಯೆಂದರೆ ಎಕರೆಗಟ್ಟಲೆ ಭೂಮಿಯೇ ಬೇಕೆಂದಿಲ್ಲ. ತಮಗಿರುವ ಸೆಂಟ್ಸ್ ಲೆಕ್ಕದ ಜಾಗದಲ್ಲೂ ಖುಷಿ ಕೊಡಬಹುದಾದ ಕೃಷಿಯನ್ನು ಬೆಳೆಸಿ ಧನ್ಯತೆ ಅನುಭವಿಸಬಹುದು ಎಂದರಲ್ಲದೆ ಕಸಿ ಕಟ್ಟುವ ವಿಧಾನ, ವಿವಿಧ ಬೆಳೆಗಳನ್ನು ಬೆಳೆಸುವ ಕ್ರಮಗಳ ಬಗೆಗೆ ವಿಸ್ತಾರವಾಗಿ ತಿಳಿಸಿದರು.
ಇಂದು ವಿದ್ಯಾರ್ಥಿಗಳು ಕೃಷಿಯಿಂದ ಹಿಂದೆ ಸರಿಯಲು ಕಾರಣ ಹೆತ್ತವರ ಮನಸ್ಸು. ಹೆತ್ತವರು ತಮ್ಮ ಮಕ್ಕಳಲ್ಲಿ ಕೃಷಿಯ ಬಗೆಗೆ ತಾತ್ಸಾರದ ಮಾತುಗಳನ್ನಾಡುತ್ತಿರುವುದೇ ಯುವ ಜನಾಂಗ ಕೃಷಿಯಲ್ಲಿ ಆಸಕ್ತಿ ತೋರದಿರಲು ಕಾರಣ. ಪರಿಣಾಮ ಮಕ್ಕಳು ದೂರದೂರುಗಳಲ್ಲಿ ನೆಲೆಸುತ್ತಾ ಮನೆಗಳು ಖಾಲಿಯಾಗುತ್ತಿವೆ ಎಂದು ವಿಷಾದಿಸಿದರು.
ಆಶಯ ಭಾಷಣ ಮಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಇದೊಂದು ವಿನೂತನ ಪ್ರಯತ್ನ. ವಿವೇಕಾನಂದ ಕಾಲೇಜು ಕೃಷಿಕರಿಗೂ ವೇದಿಕೆಯಾಗುತ್ತಿರುವುದು ಖುಷಿ ಕೊಡುವ ವಿಚಾರ. ನಿಜಾರ್ಥದಲ್ಲಿ ಮಣ್ಣಿನ ಮಕ್ಕಳೆನಿಸಿಕೊಂಡ ಕೃಷಿಕರನ್ನು ಎಷ್ಟೋ ವರ್ಷಗಳ ಮೊದಲೇ ಕರೆಸಿಕೊಳ್ಳಬೇಕಿತ್ತು. ಕನಿಷ್ಟ ಈಗಲಾದರೂ ಕರೆಸಿಕೊಂಡೆವೆಂಬ ಹೆಮ್ಮೆ ಈ ಕಾರ್ಯಕ್ರಮದಿಂದ ಮೂಡಿದೆ. ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಬಿ. ವೆಂಕಟ್ರಮಣ ಭಟ್ ಮಾಥನಾಡುತ್ತಾ, ಕೈಯೊಡ್ಡಿ ದೇಹೀ ಎನ್ನುವ ಪರಿಸ್ಥಿತಿ ಕೃಷಿಕನಿಗೆ ಯಾವತ್ತೂ ಬರುವುದಿಲ್ಲ. ಅವನದು ಸ್ವತಂತ್ರವಾದ ಬದುಕು. ನಾವು ಮಕ್ಕಳಿಗೆ ಎಳವೆಯಲ್ಲಿಯೇ ವ್ಯವಸಾಯದ ಬಗೆಗೆ ಪ್ರೀತಿ ಚಿಗುರಿಸಬೇಕು. ಅದರೊಂದಿಗೆ ಅವರಿಗೆ ಪೂರಕ ಜ್ಞಾನ ನೀಡಬೇಕು. ನಮೆಗೆಷ್ಟು ಸಾಧ್ಯವೋ ಅಷ್ಟು ಕೃಷಿ ಮಾಡಿದರೆ ನಮ್ಮ ದೇಹಕ್ಕೆ ವ್ಯಾಯಾಮ ದೊರೆಯುತ್ತದೆ. ಅದರೊಂದಿಗೆ ಅರೋಗ್ಯವೂ ವೃಧ್ಧಿಯಾಗುತ್ತದೆ ಎಂದು ಹೇಳಿದರು
ಉಪನ್ಯಾಸದ ನಂತರ ವಿ,ಕೆ.ಶರ್ಮರು ತಮ್ಮ ಕೃಷಿಭೂಮಿಯಲ್ಲಿ ಬೆಳೆದ ಹಾಗೆಯೇ ಸಹಜವಾಗಿಯೇ ಬೆಳೆದುಕೊಂಡ ವಿವಿಧ ತರಕಾರಿಗಳನ್ನು ಪ್ರದರ್ಶಿಸಿ, ಮಾಹಿತಿ ನೀಡಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಪ್ರಸ್ತಾವಿಸಿದರು. ವಿದ್ಯಾರ್ಥಿನಿ ರಕ್ಷಿತಾ ಕುಮಾರಿ ಎಂ. ಎನ್. ಪ್ರಾರ್ಥಿಸಿದರು. ಕೃಷಿ-ಖುಷಿ ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕಿ ಭುವನ ಬಾಬು ಪುತ್ತೂರು ವಂದಿಸಿದರು. ವಿದ್ಯಾರ್ಥಿ ಓಂ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.