ಅಧಿಕಾರಿಗಳು ಮಾಹಿತಿ ಕೂಡಿಡುವುದೇ ಕೃಷಿಕ ಹಿಂದುಳಿಯಲು ಕಾರಣ : ಡಾ.ಶ್ಯಾಮ ಭಟ್ ವಿ
ಪುತ್ತೂರು: ಭಾರತದ ಕೃಷಿ ಸಮಸ್ಯೆಗಳು ಹಿಂದಿನದ್ದೇ ಆಗಿದ್ದರೂ ಅವುಗಳ ಆಳ ಮತ್ತು ಅಗಾಧತೆ ಮಾತ್ರ ಪ್ರಸ್ತುತ ದಿನಗಳಲ್ಲಿ ಮೇರೆ ಮೀರಿದೆ. ಆದರೆ ಇಂದಿಗೂ ಕೂಡ ಭಾರತದಲ್ಲಿ ೬೦ ಶೇಕಡಾದಷ್ಟು ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಧಿಕಾರಿಗಳು ಮಾಹಿತಿಯನ್ನು ತಿಳಿದು, ತಮ್ಮಲ್ಲಿ ಕೂಡಿಡುವುದೇ ಕೃಷಿ ಮತ್ತು ಕೃಷಿಕ ಹಿಂದುಳಿಯಲು ಕಾರಣ ಎಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ಯಾಮ ಭಟ್ ವಿ ಹೇಳಿದರು.
ಅವರು ವಿವೇಕಾನಂದ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗವು ಕಾಲೇಜಿನ ಸುವರ್ಣ ಮಹೋತ್ಸವದ ಪ್ರಯುಕ್ತ ಆಯೋಜಿಸುತ್ತಿರುವ ಸರಣಿ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮೀಣ ಮಾರುಕಟ್ಟೆ ಮತ್ತು ಕೃಷಿ ಎಂಬ ವಿಷಯದ ಕುರಿತಾಗಿ ಸೋಮವಾರ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಜಾಗತೀಕರಣದ ಪರಿಣಾಮದಿಂದಲಾಗಿ ಕೃಷಿ ಬೆಳೆದೀತೇ ಅನ್ನುವುದು ಪ್ರಶ್ನೆ. ಈ ಹಿನ್ನಲೆಯಲ್ಲಿ ಸತ್ವಯುತವಾದ ನೂತನ ಆರ್ಥಿಕ ನೀತಿಯ ಅವಶ್ಯಕತೆಯಿದೆ. ಮಾರುಕಟ್ಟೆಯನ್ನು ನಿಯಂತ್ರಿಸಲು ರೈತರಿಗೆ ತಿಳಿದಿರಬೇಕು. ಇದಕ್ಕಾಗಿ ರೈತರಿಗೆ ಮಾಹಿತಿ ಮತ್ತು ಶಿಕ್ಷಣ ಅಗತ್ಯ ಎಂದು ನುಡಿದರು.
ಹಾಸಿಕೆ ಇದ್ದಷ್ಟೇ ಕಾಲು ಚಾಚು ಎಂಬುದನ್ನು ಗಮನದಲ್ಲಿಟ್ಟು ರೈತರು ಸಾಲಮಾಡಬೇಕು. ಹಾಗಿದ್ದರೆ ಮಾತ್ರ ಕೃಷಿಕ ಸಾಲದ ಸುಳಿಯಿಂದ ಮುಕ್ತನಾಗಬಹುದು. ಹಸಿವೆಂದವನಿಗೆ ಊಟ ಕೊಡುವುದಕ್ಕಿಂತ ಅದನ್ನು ಉತ್ಪಾದಿಸುವ ಕಲೆಯನ್ನು ತಿಳಿಸಿಕೊಡಬೇಕು. ಈ ತತ್ವವನ್ನು ಸಾಲ ನೀಡುವವರು ಅನುಸರಿಬೇಕು ಎಂದರಲ್ಲದೆ ಪುಸ್ತಕದ ಬದನೆಕಾಯಿ ನೋಡಲು ಮಾತ್ರ ಚೆನ್ನ. ಅದನ್ನು ಪದಾರ್ಥ ಮಾಡಲು ಸಾಧ್ಯವಿಲ್ಲ ಎಂಬುದನ್ನು ವಿನೂತನ ತಂತ್ರಜ್ಞಾನ ಕಂಡುಹಿಡಿಯುವಾಗ ತಿಳಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಅಧ್ಯಕ್ಷ ಶ್ರೀನಿವಾಸ ಪೈ ಪಿ ಮಾತನಾಡಿ ಮನೆಯ ಮತ್ತು ದೇಶದ ಆದಾಯವನ್ನು ಮತ್ತು ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸಲು ಅರ್ಥವ್ಯವಸ್ಥೆಯು ಅತ್ಯಗತ್ಯ ಎನ್ನುವುದರೊಡನೆ ದೇಶದ ಆರ್ಥಿಕತೆಯ ಹೆಚ್ಚಳದ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗೂ ಅರಿವಿರಬೇಕು ಎಂದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿ, ನಿರೂಪಿಸಿದರು. ವಿಭಾಗದ ಉಪನ್ಯಾಸಕ ವಾಸುದೇವ ಎನ್ ವಂದಿಸಿದರು.