’ಅಡಿಕೆ ಮಂಡಳಿಯ ರಚನೆಗೆ ಪ್ರಯತ್ನ, ವಾಣಿಜ್ಯ ಪಾರ್ಕ್ಗೆ ಆದ್ಯತೆ’ – ವಿವೇಕಾನಂದದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಡಾ.ಪ್ರಕಾಶ್ ಕಮ್ಮರಡಿ
ಪುತ್ತೂರು: ಎಲ್ಲಾ ವಾಣಿಜ್ಯ ಬೆಳೆಯ ರಕ್ಷಣೆಗೆ ಮಂಡಳಿಗಳಿವೆ. ಆದರೆ ಅಡಿಕೆಗೆ ಯಾವುದೇ ಮಂಡಳಿಗಳ ರಚನೆಯಾಗಿಲ್ಲ. ಆದ್ದರಿಂದ ಅಡಿಕೆಯ ಹಿತರಕ್ಷಣೆಗೆ ಅಡಿಕೆ ಮಂಡಳಿ ರಚನೆಯಾಗಬೇಕು. ಅದು ಸಂಪೂರ್ಣವಾಗಿ ಅಡಿಕೆ ಬೆಳೆಗಾರರಿಂದಲೇ ರೂಪುಗೊಂಡಿರಬೇಕು. ಅಲ್ಲದೆ ಆ ಮಂಡಳಿಯಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯ ನಡೆಯಬೇಕು. ತನ್ಮೂಲಕ ಅಡಿಕೆಗೆ ಸ್ಥಿರ ಧಾರಣೆಯನ್ನು ಕಾಯ್ದುಕೊಳ್ಳುವಂತಾಗಬೇಕು ಎಂದು ಕರ್ನಾಟಕ ಕೃಷಿ ದರ ಆಯೋಗದ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ, ಪತ್ರಿಕೋದ್ಯಮ, ಇತಿಹಾಸ ಹಾಗೂ ವಿವೇಕಾನಂದ ಅಧ್ಯಯನ ಕೇಂದ್ರ ಅಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಸಂಘದ ಆಶ್ರಯದಲ್ಲಿ ’ಕೃಷಿ ರಕ್ಷಿಸಿ, ಕೃಷಿಯಲ್ಲಿ ತೊಡಗಿ’ ಅನ್ನುವ ವಷಯವಾಗಿ ಗುರುವಾರ ನಡೆದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಂಆಡಿದರು.
ಅಡಿಕೆ ಬೆಳೆಯನ್ನು ಒಂದು ದೊಡ್ಡ ಉದ್ದಿಮೆಯಾಗಿ ರೂಪಿಸಬೇಕೆಂಬುದು ನಮ್ಮ ಬೆಲೆ ಆಯೋಗದ ಪ್ರಥಮ ಆದ್ಯತೆ. ಹಾಗಾಗಿ ಅಡಿಕೆ ಬೆಳೆಗೆ ಉತ್ತಮ ಧಾರಣೆ ಕಾಯ್ದುಕೊಳ್ಳುವುದಕ್ಕಾಗಿ ನಮ್ಮ ಪ್ರಯತ್ನ ಸಾಗುತ್ತಿದೆ. ಅಡಿಕೆಗೆ ವಿವಿಧ ಕಡೆಗಳಲ್ಲಿ ವಾಣಿಜ್ಯ ಅಭಿವೃದ್ಧಿ ಪಾರ್ಕ್ ರೂಪಿಸುವ ಯೋಜನೆಯಿದೆ. ಅಡಿಕೆಯ ಮೌಲ್ಯವರ್ಧನೆ ಇಂದಿನ ಆದ್ಯತೆ. ಅಡಿಕೆಯ ಬಣ್ಣವನ್ನೂ ನಾವು ವಿವಿಧ ಕಡೆಗಳಲ್ಲಿ ಬಳಸಿ ಅದಕ್ಕೂ ಮಾರುಕಟ್ಟೆ ಸೃಷ್ಟಿಸಲು ಸಾಧ್ಯ. ಅಂತೆಯೇ ಅಡಿಕೆಯಲ್ಲಿ ೭ರಿಂದ ೮ಶೇಕಡಾ ಕೊಬ್ಬಿನ ಅಂಶವಿದೆ. ಹಾಗಾಗಿ ಅಡಿಕೆಯನ್ನು ವಿವಿಧ ಆಯಾಮಗಳಲ್ಲಿ ಸ್ವೀಕರಿಸಿದರೆ ಅದಕ್ಕಿಂತ ಲಾಭಕರವಾದ ವೃತ್ತಿ ಇನ್ನೊಂದಿರದು. ಇಷ್ಟಲ್ಲದೆ ಪಶ್ಚಿಮ ಘಟ್ಟ ನಮ್ಮ ಪಾಲಿಗೆ ವರ. ಅಲ್ಲಿನ ಎಲ್ಲಾ ಉತ್ಪನ್ನಗಳಿಗೂ ಮೌಲ್ಯವರ್ಧನೆಯಾಗಬೇಕು ಎಂದು ನುಡಿದರು.
ಇತರ ಅನೇಕ ಉದ್ಯೋಗಗಳು ಹಣ, ಶ್ರೀಮಂತಿಕೆಯನ್ನು ನೀಡಬಹುದು. ಆದರೆ ಅದಷ್ಟೇ ಬದುಕೇ ಅನ್ನುವುದನ್ನು ಕೇಳಿಕೊಳ್ಳಬೇಕು. ಕೃಷಿ ಮಾತ್ರ ಆರೋಗ್ಯಕರ ಹಾಗೂ ಅರ್ಥಪೂರ್ಣ ಬದುಕನ್ನು ಒದಗಿಸಿಕೊಡಬಲ್ಲುದು. ನಮ್ಮ ಮನೆಯ ಸುತ್ತಲಿನ ಪರಿಸರ ಹಾಗೂ ಕೃಷಿ ಪದ್ಧತಿ ಒಂದಕ್ಕೊಂದು ಬೆಸೆದುಕೊಂಡಿರುವ ವಿಶೇಷ ಸನ್ನಿವೇಶದಲ್ಲಿ ನಾವು ಜೀವನ ಸಾಗಿಸುತ್ತಿದ್ದೇವೆ ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಯಾಂಪ್ಕೋ ಅಧ್ಯಕ್ಷ ಪದ್ಮನಾಭ ಕೊಂಕೋಡಿ ನಮ್ಮ ದೇಶದಲ್ಲಿ ೬೭.೬ಶೇಕಡಾ ಕೃಷಿ ಭೂಮಿ ಇದೆ. ಸುಮಾರು ೫೦ಶೇಕಡಾ ಕೃಷಿಯಲ್ಲಿ ತೊಡಗಿದವರಿದ್ದಾರೆ. ಈ ದೇಶದ ಜನರ ಸರಾಸರಿ ವಯಸ್ಸು ಕೇವಲ ಇಪ್ಪತ್ತೈದು. ಆದರೆ ಕೃಷಿಯಿಂದ ನಮ್ಮ ದೇಶಕ್ಕೆ ದಕ್ಕುವ ಜಿಡಿಪಿ ಕೇವಲ ೧೩.೭ ಶೇಕಡಾ ಮಾತ್ರ. ಆದ್ದರಿಂದ ಯುವಜನಾಂಗ ಹೊಸತನದೊಂದಿಗೆ ಕೃಷಿ ಮಾಡುವಲ್ಲಿ ಆಸಕ್ತಿ ತೋರಬೇಕು ಎಂದು ಹೇಳಿದರು.
ವಿದೇಶಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರು, ಪಿಎಚ್ಡಿ ಪಡೆದವರು ಕೃಷಿಯನ್ನು ವೃತ್ತಿಯನ್ನಾಗಿ ಸ್ವೀಕರಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ಪ್ರತಿಯೊಬ್ಬರೂ ಡಾಕ್ಟರ್, ಇಂಜಿನಿಯರ್ ಆಗುವುದಕ್ಕೇ ಬಯಸುತ್ತಿದ್ದಾರೆ. ಕೃಷಿಯನ್ನು ಇಲ್ಲಿ ಗಂಭೀರವಾಗಿ ಸ್ವೀಕರಿಸದಿರುವುದು ದುರದೃಷ್ಟ. ಅತ್ಯಂತ ಸಣ್ಣದಾದ ಇಸ್ರೇಲ್ ದೇಶವನ್ನೇ ಗಮನಿಸಿದರೆ ಅಲ್ಲಿ ಅತ್ಯಂತ ಕಡಿಮೆ ಕೃಷಿ ಭೂಮಿ ಇದೆ. ಕೇವಲ ತೊರೆ ನೀರು ಮಾತ್ರ ಲಭ್ಯವಿದೆ. ಆದಾಗ್ಯೂ ಆ ದೇಶ ಕೃಷಿಯಲ್ಲಿ ಸಾಕಷ್ಟು ಹೆಸರು ಮಾಡಿದೆ. ಇದಕ್ಕೆ ಕಾರಣ ಕೃಷಿಯ ಬಗೆಗಿನ ಅವರ ಬದ್ಧತೆ. ನಮ್ಮಲ್ಲಿಯ ಯುವಕರೂ ಆಸಕ್ತಿ ತೋರಿದರೆ ನಮ್ಮ ದೇಶವೂ ಅದ್ಭುತ ಸಾಧನೆ ಮಾಡಬಹುದು ಎಂದರು.
ಕೃಷಿಯನ್ನು ಒಂದು ದೊಡ್ಡ ವಾಣಿಜ್ಯ ಕ್ಷೇತ್ರವನ್ನಾಗಿ ಪರಿವರ್ತಿಸಿದರೆ ಇತರೆ ಯಾವುದೇ ಕ್ಷೇತ್ರದಿಂದ ಬರುವ ಆದಾಯಕ್ಕಿಂತ ಈ ಕ್ಷೇತ್ರದಲ್ಲಿ ಅಧಿಕ ವರಮಾನ ಪಡೆಯಬಹುದು. ಮಾತ್ರವಲ್ಲದೆ ಭಾರತ ಸಂಪದ್ಭರಿತವಾಗಲು ಸಾಧ್ಯ. ಇಲ್ಲಿಯ ಹೆಣ್ಣುಮಕ್ಕಳೂ ಕೃಷಿಕನನ್ನು ತಾತ್ಸಾರ ಮಾಡದೆ ವಿವಾಹವಾಗಲು ಹೆಮ್ಮೆಪಡಬೇಕು. ಆಗ ಕೃಷಿ ಕ್ಷೇತ್ರಕ್ಕೆ ನೀಡುವ ಆದ್ಯತೆ ಹೆಚ್ಚಾಗುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಮಾತನಾಡಿ ಸಮಾಜದ ಮಂದಿ ಶಿಘ್ರವಾಗಿ ಹಣ ಗಳಿಸುವ ಬಗೆಗೆ ಆಸಕ್ತರಾಗಿದ್ದಾರೆ. ಹಾಗಾಗಿಯೇ ಇಂದು ಕೃಷಿ ಅಷ್ಟೊಂದು ಆಸಕ್ತಿದಾಯಕ ಎನಿಸುತ್ತಿಲ್ಲ. ಆದರೆ ಕೃಷಿ ಅನ್ನುವುದು ಧರ್ಮ, ಪ್ರಾಮಾಣಿಕತೆಯೊಂದಿಗೆ ಮಿಳಿತವಾದ ಒಂದು ವಿಶೇಷ ಕ್ಷೇತ್ರ. ಈ ಕ್ಷೇತ್ರದ ಉಳಿಕೆ ಅತ್ಯಂತ ಅಗತ್ಯವಾದ್ದು ಎಂದು ನುಡಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಎನ್.ಎಸ್.ಭಟ್ ಹಾಗೂ ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿ.ಬಿ.ಅರ್ತಿಕಜೆಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ವಿಘ್ನೇಶ್ವರ ವರ್ಮುಡಿಯವರ ಕೃಷಿ ಉಳಿಸಿ, ಕೃಷಿಯಲ್ಲಿ ತೊಡಗಿಸಿ ಕೃತಿಯನ್ನು ಪ್ರೊ.ವಿ.ಬಿ.ಅರ್ತಿಕಜೆ ಲೋಕಾರ್ಪಣೆಗೊಳಿಸಿದರು. ವಿವೇಕಾನಂದ ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ವಿ.ವಿ.ಭಟ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರಾಧಾಕೃಷ್ಣ ಭಕ್ತ, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ ಉಪಸ್ಥಿತರಿದ್ದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿ ಪ್ರಸ್ತಾವಿಸಿದರು. ವಿಭಾಗದ ಉಪನ್ಯಾಸಕ ವಾಸುದೇವ ಎನ್ ವಂದಿಸಿದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕಿ ಮಲ್ಲಿಕಾ ವಿ ಕಾರ್ಯಕ್ರಮ ನಿರ್ವಹಿಸಿದರು.