VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ – ಕಲೆ, ಸಾಹಿತ್ಯದೆಡೆಗಿನ ಆಸಕ್ತಿ ನಮ್ಮನ್ನು ಬೆಳೆಸುತ್ತದೆ : ಅನಂತಕೃಷ್ಣ ಹೆಬ್ಬಾರ್

ಪುತ್ತೂರು: ಕಲೆ, ಸಂಸ್ಕೃತಿಯ ಬಗೆಗೆ ಆಸಕ್ತಿ ಇರಬೇಕು. ಹಾಗೆಂದು ಪ್ರತಿಯೊಬ್ಬರೂ ಕಲಾಗಾರರೇ ಆಗಬೇಕೆಂದಿಲ್ಲ. ಅದರೆಡೆಗೆ ವ್ಯಕ್ತಿಯಲ್ಲಿ ಅಡಕವಾಗಿರುವ ಒಲವೇ ವ್ಯಕ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸುತ್ತದೆ. ಜತೆಗೆ ಕಲೆಯೂ ಬೆಳವಣಿಗೆಯನ್ನು ಕಾಣುತ್ತದೆ ಎಂದು ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ, ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಅನಂತ ಕೃಷ್ಣ ಹೆಬ್ಬಾರ್ ಹೇಳಿದರು.

ಅವರು ವಿವೇಕಾನಂದ ಕಾಲೇಜಿನಲ್ಲಿ ಶನಿವಾರ ನಡೆದ ಹಿರಿಯ ವಿದ್ಯಾರ್ಥಿಗಳ ದಿನಾಚರಣೆಯಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

News Photo - Anantha Krishna Hebbar

ಅನೇಕ ಹೆತ್ತವರಿಗೆ ತಮ್ಮ ಮಕ್ಕಳು ಏನಾಗಬೇಕು ಅಥವ ಯಾರಂತಾಗಬೇಕು ಎಂಬ ಕಲ್ಪನೆಯೇ ಇಲ್ಲ. ಗಾಂಧೀಜಿಯಂತಾಗಬೇಕೇ?, ವಿವೇಕಾನಂದರಂತಾಗಬೇಕೇ? ನೆಲ್ಸನ್ ಮಂಡೇಲರಂತಾಗಬೇಕೇ?, ಮದರ್ ಥೆರೆಸಾ ತೆರನಾಗಿ ಬೆಳೆಯಬೇಕಾ? ಎಂದು ಪ್ರಶ್ನಿಸಿದರೆ ಅಂಥವರಂತಾಗುವುದು ಬೇಡ ಅನ್ನುವುದೇ ಹೆತ್ತವರ ಆಶಯವಾಗಿರುತ್ತದೆ. ಆರಾಧನೆಗೆ ಮಾತ್ರ ಅವರನ್ನು ಸೀಮಿತಗೊಳಿಸುತ್ತೇವೆ. ಕೊನೆಗೆ ಹೆತ್ತವರಂತಾದರೂ ಆಗಬೇಕಾ ಎಂಬ ಪ್ರಶ್ನೆ ಬಂದಾಗ ಅದಂತೂ ಬೇಡವೇ ಬೇಡ ಎಂಬ ಮನೋಭಾವ ನಮ್ಮಲ್ಲಿದೆ. ಹೀಗಿರುವಾಗ ಆ ಮಗು ಯಾರಂತಾಗಬೇಕೆನ್ನುವುದೇ ಬಹುದೊಡ್ಡ ಪ್ರಶ್ನೆ ಎಂದು ನುಡಿದರು.

ಪ್ರತಿಯೊಬ್ಬನಿಗೂ ಅವನದೇ ಆದ ವ್ಯಕ್ತಿತ್ವವಿದೆ. ಹಾಗಾಗಿ ಅವನಷ್ಟಕ್ಕೇ ಆತ ಬೆಳೆಯುವುದಕ್ಕೆ ವಾತಾವರಣವನ್ನು ಸಿದ್ಧಪಡಿಸಿಕೊಡಬೇಕಾದ್ದು ಹೆತ್ತವರ ಧರ್ಮ. ಅದಲ್ಲದಿದ್ದರೆ ಆತ ಆತನಾಗಿಯೂ ಉಳಿಯದೆ ಎಡಬಿಡಂಗಿಯಾಗುವ ಸಾಧ್ಯತೆಯೇ ಹೆಚ್ಚು ಎಂದರಲ್ಲದೆ ಇಂದು ಮತ್ತೊಬ್ಬರ ವಿಚಾರವನ್ನು ಆಲಿಸುವುದಕ್ಕೇ ಅಸಹನೆ ಹೆಚ್ಚುತ್ತಿರುವುದನ್ನು ಸಮಾಜದಲ್ಲಿ ಕಾಣಬಹುದು. ಇದು ಆತಂಕಕಾರಿ ಎಂದು ಅಭಿಪ್ರಾಯಿಸಿದರು.

ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಕೆ.ರಾಮ ಭಟ್ ಅವರನ್ನು ಸನ್ಮಾನಿಸಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ತನ್ನ ಸಾರ್ವಜನಿಕ ಜೀವನದಲ್ಲಿ ಅನೇಕರು ಸನ್ಮಾನಿಸುವುದಾಗಿ ಹೇಳಿದ್ದುಂಟು. ಆದರೆ ಯಾವತ್ತೂ ಸನ್ಮಾನವನ್ನು ಸ್ವೀಕರಿಸಿಲ್ಲ. ಆದರೆ ನಮ್ಮದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರೇ ತಮ್ಮ ಅಮೃತ ಹಸ್ತದಿಂದ ಸನ್ಮಾನಿಸುವಾಗ ನಿರಾಕರಿಸುವುದು ಸರಿಯಲ್ಲ ಎಂಬುದಕ್ಕಾಗಿ ಈ ಸನ್ಮಾನವನ್ನು ಸ್ವೀಕರಿಸಿದ್ದೇನೆ. ನಮ್ಮ ಸಂಸ್ಥೆ ಮುನ್ನಡೆಯುತ್ತಿರುವುದು ಸಮಾನ ಮನಸ್ಕರ ಸದುದ್ದೇಶದಿಂದ. ಇದನ್ನು ಮುನ್ನಡೆಸುವ ಕಾರ್ಯ ಹೊಸತಲೆಮಾರಿನಿಂದ ಆಗಬೇಕಿದೆ ಎಂದು ನುಡಿದರು.

News Photo - Rama Bhat Felicitation

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತಷ್ಟು ಬಲಿಷ್ಟವಾಗಬೇಕು. ಅನೇಕ ಹಿರಿಯ ವಿದ್ಯಾರ್ಥಿಗಳು ತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನೂ ಇದೇ ಸಂಸ್ಥೆಗೆ ಸೇರಿಸಿ ತಮ್ಮ ಒಲವನ್ನು ತೋರಿದ್ದಾರೆ. ಸಂಸ್ಥೆಯ ಬೆಳವಣಿಗೆಯುದ್ದಕ್ಕೂ ಹಿರಿಯ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದೆ ಎಂದು ನುಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಉಪನ್ಯಾಸಕರು, ವಿದ್ಯಾರ್ಥಿಗಳು, ಶಿಕ್ಷಕ – ರಕ್ಷಕ ಸಂಘ ಃಆಗೂ ಹಿರಿಯ ವಿದ್ಯಾರ್ಥಿಗಳು ಯಾವುದೇ ಶಿಕ್ಷಣ ಸಂಸ್ಥೆಯ ಅಮೂಲ್ಯ ಸಂಪತ್ತು. ಎಷ್ಟೇ ದೂರದಲ್ಲಿದ್ದರೂ, ಅನೇಕ ವರ್ಷಗಳಷ್ಟು ಕಾಲ ಸಂಸ್ಥೆಗೆ ಆಗಮಿಸಲು ಆಗದಿದ್ದರೂ ಇದ್ದಲ್ಲಿಂದಲೇ ಸಂಸ್ಥೆಗೆ ಕೊಡುಗೆಯನ್ನು ನೀಡುತ್ತೇವೆಂಬ ಭರವಸೆ ನೀಡುವವರಿದ್ದಾರೆ. ಇದು ಅವರಿಗೆ ತಾವು ಕಲಿತ ವಿದ್ಯಾಕೇಂದ್ರದ ಬಗೆಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರ್ ಮಾತನಾಡಿ ವಿವೇಕಾನಂದ ಕಾಲೇಜು ಅತ್ಯಂತ ಆತ್ಮೀಯ ವಾತಾವರಣವನ್ನು ಈ ಹಿಂದಿನಿಂದಲೂ ನೀಡುತ್ತಾ ಬಂದಿದೆ. ದಕ್ಷ ಆಡಳಿತ, ಮಾನವೀಯ ನೆಲೆಗಟ್ಟು, ಪ್ರಾಮಾಣಿಕತೆ, ಸಜ್ಜನಿಕೆ ಹೀಗೆ ನಾನಾ ಆಧರ್ಶಗಳಿಗೆ ಮಾದರಿಯಾಬಲ್ಲಂತಹ ವ್ಯಕ್ತಿಗಳು ಇಲ್ಲಿ ಈ ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಇದು ಈ ಸಂಸ್ಥೆಯ ಬಹುದೊಡ್ಡ ಅಗ್ಗಳಿಕೆ ಎಂದು ನುಡಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟ್ರಮಣ ಭಟ್ ಸ್ವಾಘತಿಸಿದರು. ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಹಾಗೂ ಹಿಂದಿ ಉಪನ್ಯಾಸಕಿ ಡಾ.ಆಶಾ ಸಾವಿತ್ರಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ.ವಿಘ್ನೇಶ್ವರ ವರ್ಮುಡಿ ಪ್ರಸ್ತಾವನೆಗೈದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಸುಭಾಷ್ಚಂದ್ರ ರೈ ವಂದಿಸಿದರು.