ವಿವೇಕಾನಂದದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರ್ ಮಾತನಾಡಿ ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಸಂಘದ ಬಲವನ್ನು ವೃದ್ಧಿಸುತ್ತದೆ. ಕಾಲೇಜಿನ ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದು ನುಡಿದರು.
ಹಿರಿಯ ವಿದ್ಯಾರ್ಥಿಗಳು ಈಗಿನ ವಿದ್ಯಾರ್ಥಿಗಳೊಡನೆ ಸೇರಿ ಅನೇಕ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಬೇಕು. ಪರಿಸರ ಪ್ರೀತಿಯ ಕಾರ್ಯಗಳು ಆಗಬೇಕು. ಸಾಂಪ್ರದಾಯಿಕ ಸಸ್ಯಗಳನ್ನು ನೆಡುವುದರ ಬಗೆಗೆ ಗಮನ ಹರಿಸಬೇಕು. ತನ್ಮೂಲಕ ಹಸಿರು ವಾತಾವರಣವನ್ನು ರೂಪಿಸಬೇಕು ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಸೇಡಿಯಾಪು ಜನಾರ್ಧನ ಭಟ್, ಮುರಳಿಕೃಷ್ಣ, ಪ್ರಕಾಶ್ ಕುಮಾರ್, ಹರೀಶ್ ಶಾಸ್ತ್ರಿ ಮೊದಲಾದವರು ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಹಿರಿಯ ವಿದ್ಯಾರ್ಥಿ ಶ್ರೀನಿವಾಸ ಪೈ ಹಿರಿಯ ವಿದ್ಯಾರ್ಥಿ ಗಣೇಶ ಭಟ್, ಕಾಳೇಜಿನ ಶೈಕ್ಷಣಿಕ ನಿರ್ದೇಶಕ ಹಾಗೂ ಹಿರಿಯ ವಿದ್ಯಾರ್ಥಿ ಡಾ.ವಿಘ್ನೇಶ್ವರ ವರ್ಮುಡಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಪ್ರಜ್ಞಾಶ್ರಿ, ದೀಕ್ಷಾ, ಉಷಾಪಾರ್ವತಿ, ಸುಮನ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಹರಿಪ್ರಸಾದ್ ಎಸ್ ಲೆಕ್ಕಪತ್ರ ಮಂಡಿಸಿದರು. ನೂತನ ಸದಸ್ಯರುಗಳ ಆಯ್ಕೆ ಪ್ರಕ್ರಿಯೆಯನ್ನು ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ನಡೆಸಿಕೊಟ್ಟರು. ಇಂಗ್ಲಿಷ್ ಉಪನ್ಯಾಸಕಿ ಸರಸ್ವತಿ ಕೆ ನಿರ್ವಹಿಸಿದರು.